ಆಗಸ್ಟ್ 27, 2025, ಬೆಂಗಳೂರು, ಮಲೆನಾಡುಟುಡೆ ನ್ಯೂಸ್ : ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಭರ್ತಿ ಎರಡು ವರ್ಷ ಆಗುತ್ತಿದೆ. ಫೆಬ್ರವರಿ 27 2023 ಕ್ಕೆ ಉದ್ಘಾಟನೆ ಕಂಡಿದ್ದ ವಿಮಾನ ನಿಲ್ದಾಣ ಅದೇ ವರ್ಷ ಆಗಸ್ಟ್ 30 ರಂದು ವಾಣಿಜ್ಯ ವಿಮಾನಗಳ ಹಾರಾಟಕ್ಕೆ ತನ್ನನ್ನು ತೆರೆದುಕೊಂಡಿತ್ತು. ಇದೀಗ ಶಿವಮೊಗ್ಗ ವಿಮಾನ ನಿಲ್ದಾಣ ದೇಶದ ಪ್ರಮುಖ ನಗರಗಳನ್ನು ಸಂಪರ್ಕಿಸುವ ಹಾಟ್ ಸ್ಪಾಟ್ ಆಗುತ್ತಿದೆ. ಇದಕ್ಕೆ ಪೂರಕ ಎಂಬಂತೆ ರಾಜ್ಯ ಸರ್ಕಾರ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಹೊಸ ಯೋಜನೆಗಳನ್ನು ಹಾಕಿಕೊಂಡಿದೆ.


ರಾಜ್ಯ ಸರ್ಕಾರವೇ ನೇರವಾಗಿ ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ (KSIIDC) ಮೂಲಕ ನಿರ್ವಹಿಸುತ್ತಿರುವ ಮೊದಲ ವಿಮಾನ ನಿಲ್ದಾಣವಾದ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಶೀಘ್ರದಲ್ಲೇ ಫ್ಲೈಟ್ ಟ್ರೈನಿಂಗ್ ಆರ್ಗನೈಸೇಶನ್ (FTO) ಮತ್ತು ನಿರ್ವಹಣೆ, ವಿಮಾನಗಳ ಮೇಂಟೇನೆನ್ಸ್ ಮಾಡುವ MRO ಅಥವಾ ಔವರ್ ಹೌಲ್ ಸೇವೆ ಪ್ರಾರಂಭವಾಗಲಿದೆ. ಈ ಬಗ್ಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು ಮಾತನಾಡಿದ್ದಾರೆ.
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಈ ಎರಡು ವರ್ಷಗಳಲ್ಲಿ 2,400 ವಿಮಾನಗಳು ಸಂಚರಿಸಿವೆ. ಒಂದು ಲಕ್ಷಕ್ಕೂ ಅಧಿಕ ಪ್ರಯಾಣಿಕರು ಓಡಾಟ ನಡೆಸಿದ್ದಾರೆ. ಇಂಡಿಗೋ ಏರ್‌ಲೈನ್ಸ್ 670 ಪ್ಲೇನ್ಗಳಲ್ಲಿ 31,500 ಪ್ರಯಾಣಿಕರನ್ನು ಸಾಗಿಸಿದೆ, ಇನ್ನೂ ಸ್ಟಾರ್ ಏರ್ 1,200 ಸಲ ಹಾರಾಟ ನಡೆಸಿದೆ. ಇದರಲ್ಲಿ 47,000ಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣ ಬೆಳೆಸಿದ್ದಾರೆ. ಸ್ಪೈಸ್‌ಜೆಟ್ 530 ವಿಮಾನಗಳಲ್ಲಿ 25,000 ಪ್ರಯಾಣಿಕರನ್ನು ಕರೆದೊಯ್ದಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಇದೇ ವೇಳೆ ಶಿವಮೊಗ್ಗದಲ್ಲಿ ಹೆಚ್ಚಿನ ಪ್ಲೈಟ್ ಓಡಾಟಕ್ಕೆ ಬೇಡಿಕೆ ಇರುವ ಹಿನ್ನೆಲೆಯಲ್ಲಿ ಶಿವಮೊಗ್ಗ ಏರ್ಪೋರ್ಟ್ನಲ್ಲಿ ಹಗಲು-ರಾತ್ರಿ round-the-clock ಸೇವೆಗೆ ಏರಿಸಲಾಗುತ್ತಿದೆ ಎಂದ ಸಚಿವರು ಪ್ರತಿಕೂಲ ಹವಾಮಾನ ಮತ್ತು ರಾತ್ರಿಯ ಸಮಯದಲ್ಲಿಯೂ ಸುರಕ್ಷಿತ ವಿಮಾನ ಸೇವೆಗಾಗಿ ಅತ್ಯಾದುನಿಕ ನ್ಯಾವಿಗೇಶನಲ್ ಸಾಧನಗಳಾದ ಡಿವಿಒಆರ್-ಡಿಎಂಇ (DVOR-DME) ಅಳವಡಿಸಲಾಗುತ್ತಿದೆ ಎಂದಿದ್ದಾರೆ.
