ಶಿವಮೊಗ್ಗ : ಶಿವಮೊಗ್ಗ ಜಿಲ್ಲಾ ಮೆಗ್ಗಾನ್ ಬೋಧನಾ ಆಸ್ಪತ್ರೆಯಲ್ಲಿ ಹೆಚ್ಚುತ್ತಿರುವ ಗರ್ಭಿಣಿ ಮಹಿಳೆಯರ ಸಾವುಗಳು ಹಾಗೂ ಆಸ್ಪತ್ರೆಯಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಭ್ರಷ್ಟಾಚಾರದ ಕುರಿತು ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಇಂದು SDPI (ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ) ಸಂಘಟನೆಯು ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.

ಜಿಲ್ಲೆಗೆ ಅತೀ ದೊಡ್ಡ ಆಸ್ಪತ್ರೆಯಾಗಿರುವ ಮೆಗ್ಗಾನ್, ಪ್ರತಿದಿನ ಸಾವಿರಾರು ರೋಗಿಗಳಿಗೆ ಚಿಕಿತ್ಸೆ ನೀಡುವ ಪ್ರಮುಖ ಸರ್ಕಾರಿ ಸಂಸ್ಥೆಯಾಗಿದೆ. ಸರ್ಕಾರದಿಂದ ಎಲ್ಲಾ ಸೌಲಭ್ಯಗಳನ್ನು ಹೊಂದಿರುವ ಬಹುಮಹಡಿ ಕಟ್ಟಡವಿದ್ದರೂ ಸಹ, ಇಲ್ಲಿನ ಸಂಪನ್ಮೂಲಗಳ ಸಮರ್ಪಕ ಬಳಕೆಯ ಕೊರತೆ ಎದ್ದುಕಾಣುತ್ತಿದೆ. ಇತ್ತೀಚಿನ ದಿನಗಳಲ್ಲಿ ಆಸ್ಪತ್ರೆ ಮತ್ತು ಅಲ್ಲಿನ ವೈದ್ಯರು ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಿದ್ದಾರೆ. ಅದರಲ್ಲೂ ಪ್ರಮುಖವಾಗಿ, ನವೆಂಬರ್ 28 ರಂದು ನೂರ್ ಅಫ್‌ಶಾ ಎಂಬ ಗರ್ಭಿಣಿಯು ವೈದ್ಯರ ನಿರ್ಲಕ್ಷ್ಯದಿಂದಾಗಿ ಮೃತಪಟ್ಟಿರುವ ಘಟನೆ ನಡೆದಿದೆ. ನವೆಂಬರ್ 26 ರಂದು ಲೋಕಾಯುಕ್ತರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಂಘಟನೆಯು ದೂರಿದೆ.
ಶಿಕಾರಿಪುರ : ಕೆಎಸ್ ಆರ್ ಟಿಸಿ ಬಸ್ ಕೆಳಗೆ ನಾಡಬಾಂಬ್ ಸ್ಪೋಟ
ಆಸ್ಪತ್ರೆಯ ಹೆರಿಗೆ ವಿಭಾಗದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಸಿಬ್ಬಂದಿಗಳು ಮತ್ತು ವೈದ್ಯರು ಲಂಚಕ್ಕೆ ಬೇಡಿಕೆಯಿಡುವ ಪದ್ಧತಿಯನ್ನು ರೂಢಿಸಿಕೊಂಡಿದ್ದಾರೆ ಎಂದು ಎಸ್.ಡಿ.ಪಿ.ಐ. ಗಂಭೀರ ಆರೋಪ ಮಾಡಿದೆ. ಸಾರ್ವಜನಿಕರ ಪ್ರಕಾರ, ಹೆಣ್ಣು ಮಗು ಜನಿಸಿದರೆ ರೂ.1,000/- ಮತ್ತು ಗಂಡು ಮಗು ಜನಿಸಿದರೆ ರೂ.2,000/- ಲಂಚ ನೀಡಿದ ನಂತರವಷ್ಟೇ ನವಜಾತ ಶಿಶುವನ್ನು ಕುಟುಂಬಕ್ಕೆ ಹಸ್ತಾಂತರಿಸುವ ಪದ್ಧತಿ ಅಲ್ಲಿ ಜಾರಿಯಲ್ಲಿದೆ. ಇದೇ ತಿಂಗಳು ಆಸ್ಪತ್ರೆಗೆ ಭೇಟಿ ನೀಡಿದ್ದ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌದರಿ ಅವರ ಬಳಿಯೂ ಸಾರ್ವಜನಿಕರು ಈ ಭ್ರಷ್ಟಾಚಾರದ ಕುರಿತು ಅಹವಾಲು ಸಲ್ಲಿಸಿದ್ದರು. ಈ ರೀತಿಯ ಭ್ರಷ್ಟಾಚಾರದಿಂದಾಗಿ ಜನಸಾಮಾನ್ಯರು ಕಂಗಾಲಾಗಿದ್ದಾರೆ.
ಇದಲ್ಲದೆ, ಮೆಡಿಕಲ್ ವಿಭಾಗದಲ್ಲಿಯೂ ಅವ್ಯವಸ್ಥೆ ಮುಂದುವರೆದಿದ್ದು, ವೈದ್ಯರು ಬರೆದ ಔಷಧಿಗಳ ಬದಲು ಬೇರೆ ಸಂಬಂಧವಿಲ್ಲದ ಔಷಧಿಗಳನ್ನು ರೋಗಿಗಳಿಗೆ ನೀಡಲಾಗುತ್ತಿದೆ. ಈ ಕುರಿತು ಒಬ್ಬ ಯುವತಿ ವಿಡಿಯೋ ಮಾಡಿ ಅದನ್ನು ವೈರಲ್ ಮಾಡಿದ್ದರು. ವೈದ್ಯರು ಸೂಚಿಸಿದ ಔಷಧಿಯನ್ನು ಅರ್ಧದಷ್ಟು ಮಾತ್ರ ನೀಡಿ, ಉಳಿದ ಔಷಧಿಯನ್ನು ಹೊರಗಡೆ ಖರೀದಿಸುವಂತೆ ಸಿಬ್ಬಂದಿಗಳು ಹೇಳುವುದು ಇಲ್ಲಿ ಸಾಮಾನ್ಯವಾಗಿದೆ. ಆಸ್ಪತ್ರೆಗೆ ರೋಗಿಗಳ ದಟ್ಟಣೆ ಹೆಚ್ಚಿರುವುದರಿಂದ ನೋಂದಣಿ ಮತ್ತು ಔಷಧಿ ವಿಭಾಗಗಳಲ್ಲಿ ಪ್ರತಿನಿತ್ಯ ಉದ್ದನೆಯ ಸರತಿ ಸಾಲುಗಳು ನಿರ್ಮಾಣವಾಗುತ್ತಿದ್ದು, ಈ ವಿಭಾಗಗಳನ್ನು ವಿಸ್ತರಿಸಿ ಹೆಚ್ಚಿನ ಸಿಬ್ಬಂದಿಯನ್ನು ನೇಮಿಸುವ ಅಗತ್ಯವಿದೆ ಎಂದು ಸಂಘಟನೆಯು ಹೇಳಿದೆ.
ಆದ್ದರಿಂದ, ಮೃತಪಟ್ಟ ನೂರ್ ಅಫ್‌ಶಾ ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ, ಆಸ್ಪತ್ರೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ತಡೆಯುವಂತೆ ಮತ್ತು ಒಟ್ಟಾರೆ ಅವ್ಯವಸ್ಥೆಯನ್ನು ಸರಿಪಡಿಸಿ ಜನ ಸಾಮಾನ್ಯರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವಂತೆ ಜಿಲ್ಲಾ ಸಮಿತಿಯು ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಮೂಲಕ ಒತ್ತಾಯಿಸಿದೆ.
SDPI Shimoga Demands Probe into Meggan Hospital


