ಸರ್ಜಿ ಸೂಪರ್​ ಸ್ಪೇಷಾಲಿಟಿ ಆಸ್ಪತ್ರೆಯಿಂದ 9 ತಿಂಗಳ ಮಗುವಿಗೆ ಯಶಸ್ವಿ ಶಸ್ತ್ರಚಿಕಿತ್ಸೆ : ಜಿಲ್ಲೆಯಲ್ಲಿ ಇದೇ ಮೊದಲು

prathapa thirthahalli
Prathapa thirthahalli - content producer

Sarji Hospital Shivamogga ಶಿವಮೊಗ್ಗ: ನಗರದ ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರು ಅಪರೂಪದ ಕ್ರೇನಿಯೊಸಿನೋಸ್ಟೋಸಿಸ್ (craniosynostosis) ಕಾಯಿಲೆಯಿಂದ ಬಳಲುತ್ತಿದ್ದ 9 ತಿಂಗಳ ಮಗುವಿನ ತಲೆಬುರುಡೆಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಶಿವಮೊಗ್ಗದಲ್ಲಿ ಈ ರೀತಿಯ ಶಸ್ತ್ರಚಿಕಿತ್ಸೆ ಇದೇ ಮೊದಲ ಬಾರಿಗೆ ನಡೆದಿದೆ ಎಂದು ವೈದ್ಯ ಡಾ. ಹರೀಶ್ ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ಕಾಯಿಲೆಯು ತಲೆಬುರುಡೆಯ ಮೂಳೆಗಳ ನಡುವಿನ ಬಿರುಕುಗಳು (ಸೂಚರ್‌ಗಳು) ಅವಧಿಗಿಂತ ಮೊದಲೇ ಜೋಡಣೆಯಾದಾಗ ಸಂಭವಿಸುತ್ತದೆ. ಇದರಿಂದಾಗಿ ತಲೆಬುರುಡೆಯ ಒಂದು ಭಾಗದ ಬೆಳವಣಿಗೆ ಸರಿಯಾಗಿ ಆಗುವುದಿಲ್ಲ. ಇದನ್ನು ನಿರ್ಲಕ್ಷಿಸಿದರೆ ದೃಷ್ಟಿ ದೋಷ, ಮೆದುಳಿನ ಬೆಳವಣಿಗೆಗೆ ಅಡ್ಡಿ ಅಥವಾ ಜೀವಕ್ಕೆ ಅಪಾಯ ಕೂಡ ಸಂಭವಿಸಬಹುದು ಎಂದು ಅವರು ವಿವರಿಸಿದರು.

ಈ ಶಸ್ತ್ರಚಿಕಿತ್ಸೆಯು ಅತ್ಯಂತ ಕಠಿಣ ಮತ್ತು ಕ್ಲಿಷ್ಟಕರವಾದ್ದರಿಂದ ಇದಕ್ಕೆ ನುರಿತ ವೈದ್ಯರ ತಂಡದ ಅಗತ್ಯವಿದೆ. ಈ ತಂಡದಲ್ಲಿ ನರಶಸ್ತ್ರಚಿಕಿತ್ಸಾ ತಜ್ಞರು, ಪ್ಲಾಸ್ಟಿಕ್ ಶಸ್ತ್ರಚಿಕಿತ್ಸಾ ತಜ್ಞರು ಮತ್ತು ಮಕ್ಕಳ ಅರವಳಿಕೆ ತಜ್ಞರ ಅವಶ್ಯಕತೆ ಇರುತ್ತದೆ. ಇಂತಹ ಶಸ್ತ್ರಚಿಕಿತ್ಸೆಗಳನ್ನು ಮಾಡುವ ವೈದ್ಯಕೀಯ ಕೇಂದ್ರಗಳು ದೇಶದಲ್ಲಿ ವಿರಳ ಎಂದು ಡಾ. ಹರೀಶ್ ಹೇಳಿದರು.

ಶಸ್ತ್ರಚಿಕಿತ್ಸೆಯ ತಂಡದಲ್ಲಿ ನರಶಸ್ತ್ರಚಿಕಿತ್ಸಾ ತಜ್ಞ ಡಾ. ಹರೀಶ್ ಅವರು ಮೆದುಳಿಗೆ ಹಾನಿಯಾಗದಂತೆ ಬುರುಡೆಯ ಚಿಪ್ಪನ್ನು ಬೇರ್ಪಡಿಸಿದರೆ, ಪ್ಲಾಸ್ಟಿಕ್ ಶಸ್ತ್ರಚಿಕಿತ್ಸಾ ತಜ್ಞ ಡಾ. ಚೇತನ್ ಕುಮಾರ್ ನವಿಲೆಹಾಳ್ ಅವರು ಆ ಚಿಪ್ಪನ್ನು ಸರಿಯಾದ ಆಕಾರಕ್ಕೆ ಬರುವಂತೆ ಮಾರ್ಪಡಿಸಿ ಮಗುವಿಗೆ ಅಳವಡಿಸಿದರು. ಮಕ್ಕಳ ಅರವಳಿಕೆ ತಜ್ಞ ಡಾ. ಅರ್ಜುನ್ ಭಾಗವತ್ ಅವರು ಅರವಳಿಕೆ ನೀಡಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಲು ಸಹಕರಿಸಿದರು.

ಮಗುವಿಗೆ 8 ತಿಂಗಳಿದ್ದಾಗ ಪೋಷಕರು ಅದನ್ನು ಸರ್ಜಿ ಆಸ್ಪತ್ರೆಯಲ್ಲಿ ಮಕ್ಕಳ ತಜ್ಞೆ ಡಾ. ಕಾವ್ಯಾ ಬಳಿ ತೋರಿಸಿದ್ದರು. ಆಗ ಸಿಟಿ ಸ್ಕ್ಯಾನ್ ಮಾಡಿದಾಗ ಮಗುವಿಗೆ ಕ್ರೇನಿಯೊಸಿನೋಸ್ಟೋಸಿಸ್ ಇರುವುದು ದೃಢಪಟ್ಟಿತ್ತು. ವೈದ್ಯರ ತಂಡವು ಪೋಷಕರಿಗೆ ಈ ಶಸ್ತ್ರಚಿಕಿತ್ಸೆಯ ಬಗ್ಗೆ ಸಂಪೂರ್ಣವಾಗಿ ವಿವರಿಸಿದಾಗ, ಅವರು ಧೈರ್ಯದಿಂದ ಒಪ್ಪಿಗೆ ನೀಡಿದರು. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಮಗು ಈಗ ಆರೋಗ್ಯವಾಗಿದೆ ಎಂದು ವೈದ್ಯರು ತಿಳಿಸಿದರು.

Sarji Hospital Shivamogga

Share This Article