ಶಿವಮೊಗ್ಗದಲ್ಲಿ ಹೊಳೆ ಚಿನ್ನದ ಲೂಟಿಯಲ್ಲಿ ಕ, ಅ, ಮೇ, ಪೊ ಇಲಾಖೆಗಳಿಗೆ ತಿಂಗಳ ಲಕ್ಷಗಟ್ಟಲೇ ಇನ್‌ಕಮ್‌ | ನಿಜವಾ? JP ಬರೆಯುತ್ತಾರೆ

sand mining in Shivamogga, illegal sand mining ,Tunga, Bhadra rivers

ಶಿವಮೊಗ್ಗದಲ್ಲಿ ಹೊಳೆ ಚಿನ್ನದ ಲೂಟಿಯಲ್ಲಿ ಕ, ಅ, ಮೇ, ಪೊ ಇಲಾಖೆಗಳಿಗೆ ತಿಂಗಳ ಲಕ್ಷಗಟ್ಟಲೇ ಇನ್‌ಕಮ್‌ | ನಿಜವಾ? JP ಬರೆಯುತ್ತಾರೆ
sand mining in Shivamogga, illegal sand mining ,Tunga, Bhadra rivers

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 7, 2025 ‌‌   

ಶಿವಮೊಗ್ಗ ಜಿಲ್ಲೆಯಲ್ಲಿ ಸರ್ಕಾರಿ ಅಧಿಕೃತ ಕ್ವಾರಿಗಳಿಗೆ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕೃತ ಚಾಲನೆ ನೀಡದಿರುವ ಹಿಂದೆ ಅಕ್ರಮ ಮರಳು ಮಾಫೀಯ ವ್ಯವಸ್ಥಿತವಾಗಿ ಕೆಲಸ ಮಾಡುತ್ತಿದೆ. ಶಿವಮೊಗ್ಗ ಗ್ರಾಮಾಂತರ ಹೊಳೆಹೊನ್ನೂರು ಭಾಗಗಳಲ್ಲಿ ತುಂಗಾ ಹಾಗೂ ಭದ್ರಾ ನದೆಯ ಒಡಲನ್ನು ಅಕ್ರಮವಾಗಿ ಬಗೆಯಲಾಗುತ್ತಿದೆ ಎಂಬುದೇ ಇದಕ್ಕೆ ದೊಡ್ಡ ಸಾಕ್ಷಿ

ನದಿಗೆ ಬೋಟು ಬಳಸಿ ಮೋಟಾರಿನಿಂದ ರಕ್ತ ಹೀರುವಂತೆ ಮರಳ ರಾಶಿಯ ನೀರನ್ನು ಹೀರಿ ದಡಕ್ಕೆ ಹಾಯಿಸಲಾಗುತ್ತಿದೆ. ಅಕ್ರಮ ಮರಳು ಗಣಿಗಾರಿಕೆಗೆ ಜಿಲ್ಲಾಡಳಿತವೇ ಪರೋಕ್ಷವಾಗಿ ಬೆಂಬಲಕ್ಕೆ ನಿಂತಂತೆ ಕಾಣುವ ಅನುಮಾನದ ವಾತಾವರಣ ನಿರ್ಮಾಣವಾಗಿದೆ ಎಂಬದಕ್ಕೆ ಪೂರಕವಾಗಿ ಹಲವು ದೂರುಗಳಿಂದ ಹಿಡಿದು ರಾಜ್ಯ ಮಟ್ಟದ ವರದಿಗಳಿಗೂ ಇಲಾಖೆಯ ಅಧಿಕಾರಿಗಳು ಕಿಮ್ಮತ್ತು ನೀಡುತ್ತಿಲ್ಲ

ಮರಳಿಗಾಗಿ ರಚನೆಯಾದ ಟಾಸ್ಕ್ ಫೋರ್ಸ್ ಹಲ್ಲು ಕಿತ್ತ ಹಾವಿನಂತಾಗಿದೆ. ಮತ್ತೂರು ಬಳಿಯ ಸಿದ್ದರಹಳ್ಳಿಯಲ್ಲಿ ಮೂರು ಕ್ವಾರಿ, ಹಾಡೋನಹಳ್ಳಿಯಲ್ಲಿ ಮೂರು ಕ್ವಾರಿಗಳನ್ನು ಮಾಡಿಕೊಂಡು ಅಕ್ರಮವಾಗಿ ಮರಳು ಬಗೆಯಲಾಗುತ್ತಿದೆ. ಮಡಿಕೆ ಚೀಲೂರು ಬಳಿ ಮೂರು ಕ್ವಾರಿಗಳು ಸೃಷ್ಟಿಯಾಗಿದೆ. ಹೊಳೆಹಟ್ಟಿಯಲ್ಲಿ ಮೂರು ಬ್ಲಾಕ್, ಸಿದ್ಲಿಪುರ ಮೂರು ಬ್ಲಾಕ್, ಗೋಂದಿ ಚಟ್ನಹಳ್ಳಿಯ ಬಳಿ ಒಂದು ಬ್ಲಾಕ್, ಹೀಗೆ ತುಂಗಾ ಮತ್ತು ಭದ್ರಾ ನದಿಯ ಪಾತ್ರದಲ್ಲಿ ಅಹೋರಾತ್ರಿ ಮರಳನ್ನು ಅಕ್ರಮವಾಗಿ ತೆಗೆಯಲಾಗುತ್ತಿದೆ. ಸುಮಾರು 25 ಕ್ಕೂ ಹೆಚ್ಚು ಅನಧಿಕೃತ ಮರಳು ಕ್ವಾರಿಗಳನ್ನ ಎಗ್ಗಿಲ್ಲದೆ ದಂಧೆಕೋರರು ನಡೆಸುತ್ತಿದ್ದಾರೆ.

ಸ್ಥಳೀಯ ದೇವಸ್ಥಾನಗಳಿಗೆ ಹಣ ಪಾವತಿಸಿದರೆ ಸಾಕು

ಮರಳು ಸಾಗಿಸುವವರು ಸಂಬಂಧಿಸಿದ ದೇವಸ್ಥಾನ ಆಡಳಿತ ಮಂಡಳಿಗೆ ಇಂತಿಷ್ಟು ಲಕ್ಷ ರೂಪಾಯಿ ಹಣ ಪಾವತಿಸಿ, ಅನಧಿಕೃತವಾಗಿ ಮರಳಿನ ಟೆಂಡರ್ ಪಡೆದುಕೊಳ್ಳುತ್ತಿದ್ದಾರೆ. ಆದರೆ ಇದರಿಂದ ನದಿ ದಂಡೆಯಲ್ಲಿ ಸಾವಿನ  ಅಪಾಯಗಳು ಸಂಭವಿಸುತ್ತದೆ. ಉದಾಹರಣೆಗೆ ಹಾಡೋನಹಳ್ಳಿಯಲ್ಲಿ 2016 ರಲ್ಲಿ ಇದೇ ಅಕ್ರಮ ಮರಳು ಗಣಿಗಾರಿಕೆಯಿಂದ ನದಿಯಲ್ಲಿ ಆದ ಬೃಹತ್ ಗುಂಡಿಗಳು ಸುಳಿಯನ್ನು ಸೃಷ್ಟಿಸಿದ್ದವು. ಪರಿಣಾಮ ಗಣಪತಿ ವಿಸರ್ಜನೆ ಮಾಡುವ ಸಂದರ್ಭದಲ್ಲಿ ಸುಳಿಗೆ ಸಿಲುಕಿ ತೆಪ್ಪು ಮುಗುಚಿ 12 ಮಂದಿ ಯುವಕರು ಸಾವನ್ನಪ್ಪಿದರು. ಈ ಘಟನೆ ಇನ್ನು ಹಸಿರಾಗಿಯೇ ಇದೆ. ಇದೀಗ ಮತ್ತದೆ ಭಾಗದಲ್ಲಿ ಪ್ರತಿದಿನ ಹತ್ತು ಹನ್ನೆರಡು ಜೆಸಿಬಿ ಯಂತ್ರಗಳಲ್ಲಿ ನದಿಯಲ್ಲಿ ಮರಳನ್ನು ಅಕ್ರಮವಾಗಿ ಬಗೆಯಲಾಗುತ್ತಿದೆ. ಇದು ಮಂದಿನ ದಿನಗಳಲ್ಲಿ ಅಪಾಯವನ್ನೇ ಸೃಷ್ಟಿಸುತ್ತೆ ಎನ್ನುವುದರಲ್ಲಿ ಸಂಶಯವಿಲ್ಲ

ಪ್ರತಿದಿನ 100 ಕ್ಕೂ ಹೆಚ್ಚು ಲಾರಿ ಅಕ್ರಮವಾಗಿ ನಗರ ಪ್ರವೇಶ

ಶಿವಮೊಗ್ಗ ಸುತ್ತಮುತ್ತ ನಡೆಯುವ ಅಕ್ರಮ ಮರಳು ಗಣಿಗಾರಿಕೆಗೆ ರಾತ್ರಿಯೇ ನಂದಾದೀಪವಾಗಿದೆ. ರಾತ್ರಿಯಾಗುತ್ತಿದ್ದಂತೆ ನದಿ ದಡದಿಂದ ಸಾಗುವ ಲಾರಿಗಳು ಒಂದೊಂದಾಗಿ ಶಿವಮೊಗ್ಗ ನಗರವನ್ನು ಅನಾಯಾಸವಾಗಿ ಪ್ರವೇಶಿಸುತ್ತವೆ. ಇಲ್ಲಿ ಪೊಲೀಸ್, ಮೈನ್ಸ್ ಕಂದಾಯ ಇಲಾಖೆ ಅಧಿಕಾರಿ ಸಿಬ್ಬಂದಿಗಳ ಲೈನ್ ಅಪ್ ಮಾಡಿಕೊಂಡೇ ಲಾರಿ ಮಾಲೀಕರು ಶಿವಮೊಗ್ಗ ಪುರ ಪ್ರವೇಶ ಮಾಡುತ್ತಾರೆ. ಜನರಿಗೆ ಸಿಂಗಮ್‌ ಥರ ಫೋಸ್‌ ಕೊಡುವಂತವರೇ ಕೆಲವರು, ಒಳಗೊಳಗೆ ದೊಡ್ಡ ವರಮಾನದಲ್ಲಿದ್ದಾರೆ ಎಂಬುದು ಇಲಾಖೆಯಲ್ಲಿ ಬಹಿರಂಗವಾಗಿಯೇ ಗೊತ್ತಿರುವ ಸತ್ಯ . ಸದ್ಯ ರೇಟು ಒಂದು ಲಾರಿಗೆ ಪ್ರತಿತಿಂಗಳು ಹತ್ತು ಸಾವಿರ ಮೂಮೂಲಿ ಪಡೆಯಲಾಗುತ್ತಿದೆಯಂತೆ. ಇನ್ನೊಂದು ಲಾರಿ ಸುದ್ದಿಯ ಪ್ರಕಾರ, ಅಕ್ರಮ ಕ್ವಾರಿಗಳಿಂದ ಗಣಿ ಇಲಾಖೆಗೆ ಒಂದು ಲಕ್ಷ ರೂಪಾಯಿಗೂ ಅಧಿಕ ಕಾಣಿಕೆ ಸಂದಾಯವಾಗುತ್ತಿದೆಯಂತೆ. ಗಣಿ ಇಲಾಖೆಯ ಹೊರಗಡೆಯ ಗೇಟು ಬಳಿಯೇ ಈ ಸುದ್ದಿಗಳು ಹರಿದಾಡುತ್ತವೆ. ಇವೆಲ್ಲಾ ಅಧಿಕೃತವೇ ಅಲ್ಲವೇ ಅನ್ನೋದಕ್ಕೆ ಅಂತಲೇ ಕೆಲವರು ಲೋಕಾಯುಕ್ತ ಇಲಾಖೆಯ ಕದ ತಟ್ಟುತ್ತಿದ್ದಾರೆ. ಇನ್ನೊಂದೆಡೆ ಇಷ್ಟೆಲ್ಲದರ ನಡುವೆ ಆದರೆ ಇಷ್ಟೆಲ್ಲಾ ನಡೆದರೂ, ಶಿವಮೊಗ್ಗ ತಹಸಿಲ್ದಾರ್ ಯಾಕೆ ಮೌನವಾಗಿದ್ದಾರೆ ಎಂಬುದು ಸಹ ಕುತೂಹಲ ಮೂಡಿಸ್ತಿದೆ.

ಇನ್ನೂ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಈ ಅಕ್ರಮ ಮರಳು ದಂಧೆಯ ನಿಯಂತ್ರಣಕ್ಕೆ ಅದಿಕಾರಿಗಳಿಗೆ ಮೂಗುದಾರ ಹಾಕಹೇಕಿದೆ. ಶಿವಮೊಗ್ಗ ಗ್ರಾಮಾಂತರ ಭಾಗಗಳಿಗೆ ಲೋಕಾಯುಕ್ತರು ಖುದ್ದು ಭೇಟಿ ನೀಡಿದರೆ..ಮರಳು ದಂಧೆಯ ರಾಕೇಟ್ ಜಾಲ ಹೇಗೆಲ್ಲಾ ವಿಸ್ತರಿಸಿದೆ ಎಂಬ ವಾಸ್ತವ ಅರಿವಾಗುತ್ತದೆ. ಸರ್ಕಾರಕ್ಕೆ ನಷ್ಟ ಮಾಡಿದ ಅಧಿಕಾರಿಗಳ ವಿರುದ್ಧ ಸುಮೋಟೋ ಕೇಸ್ ದಾಖಲಿಸಿಕೊಂಡು ತನಿಖೆಗೆ ಮುಂದಾಗಬೇಕಿದೆ ಎಂಬುದು ಶಿವಮೊಗ್ಗದ ಹೋರಾಟಗಾರರ ಆಗ್ರಹ. ಇವೆಲ್ಲದರ ನಡುವೆ ಮರಳು ಸಮಿತಿಯ ಅಧ್ಯಕ್ಷರಾಗಿರುವ ಡಿಸಿಯವರು ಈ ಎಲ್ಲಾ ಅಕ್ರಮಗಳಿಗೆ ಕಡಿವಾಣ ಹಾಕಬೇಕಿದೆ. ಜಿಲ್ಲಾ ಉಸ್ತುವಾರಿ ಸಚಿವರು ಮರಳು ದಂಧೆ ಹೊಲಸು ಎಂದು ಕೈ ಚೆಲ್ಲಿದ್ದನ್ನೇ ಕೆಲವರು ಬಂಡವಾಳ ಮಾಡಿಕೊಂಡು ನದಿಯ ಒಡಲಿಗೆ ಕೈ ಹಾಕಿರುವುದು ದುರಂತವೇ ಸರಿ.

SUMMARY |  Excessive sand mining in Shivamogga, illegal sand mining in Tunga, Bhadra rivers

KEY WORDS | sand mining in Shivamogga, illegal sand mining ,Tunga, Bhadra rivers