ಸಕ್ರೆಬೈಲ್ ಆನೆ ಬಿಡಾರದಲ್ಲಿ 1 ರಾತ್ರಿಯಲ್ಲಿ 2 ದುರಂತ | ಮರಿಯಾನೆ ಸಾವು, ಮಾವುತನ ಮೇಲೆ ಕಾಡಾನೆ ದಾಳಿ! ನಡೆದಿದ್ದೇನು? JP ಬರೆಯುತ್ತಾರೆ
sakrebail elephant camp updates

SHIVAMOGGA| MALENADUTODAY NEWS | ಮಲೆನಾಡು ಟುಡೆ Mar 11, 2025
ಮಾವುತ ಕಾವಾಡಿಗಳ ಹಗಲು ರಾತ್ರಿಯ ಆರೈಕೆಗೆ ಸ್ಪಂದಿಸದ ಚೊಚ್ಚಲ ಮರಿಯಾನೆ. ಹಾಲು ಕುಡಿಯದೆ ಉಸಿರು ಚೆಲ್ಲಿತು..ಕಾಡಾನೆಯ ಸಾಂಗತ್ಯವೇ ಮುಳುವಾಯಿತೇ...ಜೆಪಿ ಬರೆಯುತ್ತಾರೆ.
ಸಕ್ರೆಬೈಲು ಆನೆ ಬಿಡಾರದಲ್ಲಿನ ಹೆಣ್ಣಾನೆಗಳ ಪಾಲಿಗೆ ಕಾಡಾನೆಗಳೇ ಆಕರ್ಷಣೆಯ ಕೇಂದ್ರವಾಗಿದೆ. ಬಿಡಾರದ ಹೆಣ್ಣಾನೆಳು ಕಾಡಾನೆಗಳ ಸಾಂಗತ್ಯದಲ್ಲಿ ವೈಲ್ಡ್ ಜೀನ್ ಗಳನ್ನೆ ಬಿಡಾರಕ್ಕೆ ಉಡುಗೊರೆಯಾಗಿ ನೀಡುತ್ತಿವೆ. ಬೆಳಿಗ್ಗೆ ಬಿಡಾರದಿಂದ ಶೆಟ್ಡಿಹಳ್ಳಿ ಕಾಡಿನ ಪರಿಸರ ಸೇರುವ ಬಿಡಾರದ ಹೆಣ್ಣಾನೆಗಳನ್ನು, ಕಾಡಾನೆಗಳು ಒಲಿಸಿಕೊಳ್ಳುವುದು ಒಂದು ಸಂಪ್ರದಾಯವೇ ಆಗಿದೆ.
ಆದರೆ ಬಿಡಾರದ ಗಂಡಾನೆಗಳ ಪಾಲಿಗೆ ಕಾಡಾನೆಗಳು ಶಾಪವೂ ಹೌದು. ಏಕಂದರೆ, ಹೆಣ್ಣಾನೆಗಳ ಸೆಳೆಯುವ ಕಾಡಾನೆಗಳ ದಾಳಿಗೆ ನ್ಯೂ ಟಸ್ಕರ್ ರಂಗ, ರಾಜೇಂದ್ರ ನಂತ ದೈತ್ಯ ಸಾಕಾನೆಗಳು ಪ್ರಾಣತೆತ್ತಿದೆ. ಇನ್ನೊಂದೆಡೆ ಹೆಣ್ಣಾನೆಗಳನ್ನು ಮನವೊಲಿಸಿಕೊಳ್ಳುವ ಕಾಡಾನೆಗಳು ಅವುಗಳನ್ನು ತಿಂಗಳು ಗಟ್ಟಲೆ ಕಾಡಿನಲ್ಲಿ ತಮ್ಮೊಂದಿಗೆ ಇರಿಸಿಕೊಳ್ಳುತ್ತವೆ. ಈ ಸಂದರ್ಭದಲ್ಲಿ ಮಾವುತ ಕಾವಾಡಿಗಳು ತಮ್ಮ ಪ್ರಾಣ ಪಣಕ್ಕಿಟ್ಟು ಹೆಣ್ಣಾನೆಗಳನ್ನು ಬಿಡಾರಕ್ಕೆ ತರಬೇಕಾಗುತ್ತದೆ. ಕಾಡಾನೆಗಳ ಜೊತೆಗಿದ್ದ ಸಂದರ್ಭದಲ್ಲಿ ಹೆಣ್ಣಾನೆಗಳು ಮಾವುತನ ಯಾವ ಆಜ್ಞೆಯನ್ನು ಪಾಲಿಸದೇ ಒಂದು ರೀತಿಯಲ್ಲಿ ವೈಲ್ಡ್ ಆಗಿರುತ್ತದೆ. ಇಂತಹದ್ದೆ ಸನ್ನಿವೇಶ ಕಳೆದ ರಾತ್ರಿ ಶೆಟ್ಟಿಹಳ್ಳಿ ಕಾಡಿನ ಪರಿಸರದಲ್ಲಿ ಎದುರಾಗಿದ್ದು, ಕಾಡಾನೆಯ ಸಂಪರ್ಕದಲ್ಲಿದ್ದ ಹತ್ತುವರೆ ವರ್ಷದ ಹೇಮಾವತಿಯನ್ನು ಕರೆತರುತ್ತಿದ್ದ ಮಾವುತನ ಮೇಲೆ ಕಾಡಾನೆ ದಾಳಿ ನಡೆಸಿದೆ. ಅಲ್ಲದೆ ಹೇಮಾವತಿಯ ಐದು ದಿನದ ಗಂಡು ಮರಿ ಸಾವನ್ನಪ್ಪಿದೆ.
ಮಲೆನಾಡು ಟುಡೆಗೆ ಲಭ್ಯವಾದ ಮಾಹಿತಿ ಪ್ರಕಾರ, ವನ್ಯಜೀವಿ ವಿಭಾಗದ ಸಕ್ರೆಬೈಲ್ ಆನೆ ಬಿಡಾರದ ಆನೆ ಹೇಮಾವತಿ ಮರಿ ಹಾಕಿರುವ ವಿಚಾರವನ್ನು ಹೊರಜಗತ್ತಿಗೆ ತಿಳಿಸಿರಲಿಲ್ಲ. ಐದು ದಿನಗಳ ಹಿಂದೆ ಹೇಮಾವತಿ ಮರಿಯೊಂದಕ್ಕೆ ಜನ್ಮ ನೀಡಿದೆ. ಹೇಮಾವತಿಗೆ ಇದು ಚೊಚ್ಚಲ ಹೆರಿಗೆಯಾಗಿದ್ದು, ಮರಿ ಜನಿಸುತ್ತಲೇ ತಾಯಿ ಮರಿಗೆ ಹಾಲು ಕುಡಿಸಲು ಹಿಂದೇಟು ಹಾಕಿದೆ. ಹೀಗಾಗಿ ಮರಿಗೆ ತಕ್ಕ ಆರೈಕೆ ಸಿಗದೇ ಮರಿ ಸಾವನ್ನಪ್ಪಿದೆ ಎನ್ನಲಾಗಿದೆ. ಸಾಮಾನ್ಯವಾಗಿ 14 ವರುಷದ ಆನೆಯು ಗರ್ಭವತಿಯಾಗುತ್ತದೆ. ಇನ್ನೂ 10 ವರುಷದ ಹೇಮಾವತಿ ವಾಡಿಕೆ ಅವಧಿಗೂ ಮೊದಲೇ ಗರ್ಭಿಣಿಯಾಗಿದೆ. ಹೀಗಾಗಿ ಅದರ ಮರಿಯು ಸಹ ಪೂರ್ಣ ಪ್ರಮಾಣದಲ್ಲಿ ಬೆಳವಣಿಗೆ ಹೊಂದಿರಲಿಲ್ಲ. ಮೇಲಾಗಿ ಹೇಮಾವತಿಗೆ ತಾಯ್ತನದ ಅರಿವು ಮೂಡಿರದ ಹಿನ್ನೆಲೆಯಲ್ಲಿ ಅದು ಮರಿಗೆ ಹಾಲು ಕುಡಿಸಲು ನಿರಾಕರಿಸಿದೆ. ಈ ನಡುವೆ ಮಾವುತ, ವೈದ್ಯಾಧಿಕಾರಿಗಳು ಹೇಮಾವತಿಯನ್ನು ನಿಯಂತ್ರಣದಲ್ಲಿಟ್ಟು, ಅದರಿಂದ ಹಾಲು ಕರೆದು ಮರಿಗೆ ಕುಡಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಕಾಡಾನೆಯ ಮಧ್ಯಪ್ರವೇಶದಿಂದ ಹೇಮಾವತಿಯನ್ನು ಹೆಚ್ಚು ಹೊತ್ತು ನಿಯಂತ್ರಣದಲ್ಲಿಟ್ಟುಕೊಳ್ಳಲು ಸಾಧ್ಯವಾಗಲಿಲ್ಲ. ಹೇಮಾವತಿ ತನ್ನ ಜೊತೆಗೆ ಆರೈಕೆಯಿಲ್ಲದ ಮರಿಯನ್ನು ಸಹ ಕಾಡಿನಲ್ಲಿ ನಡೆದಾಡಿಸಿದೆ. ಪರಿಣಾಮ ನಿತ್ರಾಣಗೊಂಡ ಮರಿ ಸಾವನ್ನಪ್ಪಿದೆ.
ಕಾಡಿನಲ್ಲಿಯೇ ಹೇಮಾವತಿ ಮರಿಹಾಕಿದ್ದರೂ, ಅದನ್ನು ಶತಾಯಗತಾಯ ಉಳಿಸಿಕೊಳ್ಳುವ ಪ್ರಯತ್ನವನ್ನು ಸಕ್ರೆಬೈಲ್ ಮಾವುತ ಹಾಗೂ ಕಾವಾಡಿಗಳ ತಂಡ ಮಾಡಿತ್ತು. ಕಾಡಾನೆ ಜೊತೆಗಿದ್ದರೂ ಜೀವ ಭಯದಲ್ಲಿಯೇ ವನ್ಯ ಜೀವಿ ವೈದ್ಯ ವಿನಯ್ ಹಾಗು ಮಾವುತರ ತಂಡ ಮರಿ ಆನೆಯ ಆರೈಕೆ ಮಾಡಿದ್ದರು. ಪಟಾಕಿ ಸಿಡಿಸಿ ಕಾಡಾನೆಯನ್ನು ಓಡಿಸಿ ಚೊಚ್ಚಲ ಮರಿಗೆ ಹಾಲುಣಿಸುವ ಪ್ರಯತ್ನ ಮಾಡಿದ್ದರು. ತಾಯಿಯ ಗಿಣ್ಣದ ಹಾಲನ್ನು ಬಾಟಲಿಗೆ ತುಂಬಿ ಮರಿಗೆ ಕುಡಿಸಿದ್ದಾರೆ. ಅದರೆ ತಾಯಿ ಮರಿಗೆ ಹಾಲು ಕುಡಿಸುವ ಮನಸ್ಸು ಮಾಡುತ್ತಿಲ್ಲ. ಮರಿಗೆ ತಾಯಿ ಕೆಚ್ಚಲಿಗೆ ಬಾಯಿ ಹಾಕಿ ಹಾಲು ಕುಡಿಯುಲು ಗೊತ್ತಾಗುತ್ತಿಲ್ಲ. ವನ್ಯಜೀವಿಗಳಲ್ಲಿ ಪ್ರಿಮ್ಯಚೂರ್ ಗರ್ಭಧಾರಣೆಯಾದಲ್ಲಿ ಇಂತಹ ಸನ್ನಿವೇಶ ಎದುರಾಗುತ್ತದೆ ಎನ್ನುತ್ತಾರೆ ತಜ್ಞರು.
ಈ ನಡುವೆ ಮರಿ ಆನೆಯ ಆರೈಕೆಯಲ್ಲಿದ್ದ ಮಾವುತ ಕಳೆದ ರಾತ್ರಿ ಮರವೇರಿ ವಾಚ್ ಅಂಡ್ ಗಾರ್ಡ್ ಮಾಡುತ್ತಿದ್ದ..ಈ ಸಂದರ್ಭದಲ್ಲಿ ಹೇಮಾವತಿ ಬಳಿಯಿದ್ದ ಕಾಡಾನೆ ಮಾವುತನನ್ನ ನೋಡಿ ದಾಳಿಗೆ ಮುಂದಾಗಿದೆ. ಸಮಯ ಪ್ರಜ್ಞೆ ಮೆರೆದ ಮಾವುತ ತಕ್ಷಣ ತಪ್ಪಿಸಿಕೊಂಡು ಮರ ಇಳಿದು ಓಡಿದ್ದಾನೆ .ಈ ಸಂದರ್ಭದಲ್ಲಿ ಸಣ್ಣಪುಟ್ಟ ಗಾಯಗಳಾಗಿದೆ ಎಂದು ಶಿವಮೊಗ್ಗ ವನ್ಯಜೀವಿ ಡಿಸಿಎಫ್ ಪ್ರಸನ್ನ ಪಟಗಾರ್ ತಿಳಿಸಿದ್ದಾರೆ.
ಮಲೆನಾಡು ಟುಡೆ ಜೊತೆ ಮಾತನಾಡಿದ ಡಿಸಿಎಫ್ ಪ್ರಸನ್ನ ಪಟಗಾರ್, ನಮ್ಮ ಮಾವುತ ಕಾವಾಡಿ ವೈದ್ಯರ ತಂಡ ಚೊಚ್ಚಲ ಮರಿಯನ್ಬು ಉಳಿಸಿಕೊಳ್ಳಲು ನಿರಂತರ ಪರಿಶ್ರಮ ವಹಿಸಿದೆ. ಹೇಮಾವತಿ ಹತ್ತುವರೆ ವರ್ಷಕ್ಕೆ ಮರಿಗೆ ಜನ್ನ ನೀಡಿದೆ. ಚೊಚ್ಚಲ ಮರಿಯ ಆರೋಗ್ಯ ದಲ್ಲಿ ವ್ಯತ್ಯಾಸವಾಗಿದೆ. ತಾಯಿಗೆ ಹಾಲುಣಿಸುವ ತಾಯ್ತನದ ಪರಿಕಲ್ಪನೆ ಇಲ್ಲ. ಮರಿಗೆ ಹಾಲನ್ನು ಹೇಗೆ ನೈಸರ್ಗಿಕವಾಗಿ ಕುಡಿಯಬೇಕೆಂದು ಗೊತ್ತಿಲ್ಲ..ಹಾಲು ಕಡಿಸಲು ನಮ್ಮ ಸ್ಟಾಫ್ ಶ್ರಮ ಪಟ್ಟಿದೆ.ಆದರೆ ಕಾಡಾನೆ ಬಹಳಷ್ಷು ದೂರ ಹೇಮಾವತಿಯೊಂದಿಗೆ ಹೆಜ್ಜೆ ಹಾಕಿದೆ..ಕಾಡಾನೆ ಹೋದಲ್ಲೆಲ್ಲ ಹೇಮಾವತಿ ತನ್ನ ಮರಿಯೊಂದಿಗೆ ಸಾಗಿದೆ..ತುಂಬಾ ಬಳಲಿದ ಮರಿಯಾನೆ ಸುಸ್ತಾಗಿ ಸಾವನ್ನಪ್ಪಿದೆ ಎಂದು ಪ್ರಸನ್ನ ಪಟಗಾರ್ ಹೇಳಿದ್ದಾರೆ