ಒಬ್ಬಳು ಸುಂದರಿ ಇದ್ದಳು | ಪ್ರೀತಿಯನ್ನ ಕೊಂದನೇಕೆ ಕೊಲೆಗಾರ | ಪ್ರೇಮಿಗಳಿಗೆ ಇದು ಎಚ್ಚರಿಕೆ
kopa girl murder case in shivamogga 1

SHIVAMOGGA | MALENADUTODAY NEWS | Jul 26, 2024
ಪ್ರೀತಿಯಲ್ಲಿ ಎಲ್ಲವೂ ಸಹಜ ಸಂತೋಷವೆ ಸರಿ, ಆದರೆ ಹಿಂಸೆ ಪ್ರೀತಿಯನ್ನ ಭೀಕರವಾಗಿಸುತ್ತೆ, ಬದುಕನ್ನ ಭೀಭತ್ಸವಾಗಿಸುತ್ತೆ. ಹೆದ್ದಾರಿಪುರದ ಮುಂಬಾಳು ಸಮೀಪ ಮಣ್ಣಲ್ಲಿ ಸಿಕ್ಕ ಸುಂದರ ಯುವತಿಯ ಕಥೆಯು ಇದೆ. ಆಕೆ ತಾನು ಪ್ರೀತಿಸಿದ ತಪ್ಪಿಗೆ ಹೆಣವಾಗಿದ್ದಳು, ತಾನು ಮದುವೆಯಾಗಬೇಕು ಎಂದು ಹಠ ಹಿಡಿದಿದ್ದಕ್ಕೆ ಕೊಲೆಯಾಗಿದ್ದಳು. ಕೊಲೆ ಮಾಡಿದವನ ಕಣ್ಣಲ್ಲಿ ಪಶ್ಚಾತಾಪವಿರಲಿಲ್ಲ. ತಪ್ಪಿತು ಕಾಟ ಎಂಬಂತಹ ಭಾವವಿತ್ತು. ಆಕೆಗೆ ಆತ ಹಿತವಾಗಿದ್ದ, ತಾಯಿಯ ಮಡಿಲಾಗಿದ್ದ. ಆದರೆ ಆತನಿಗೆ ಆಕೆ ಬಿಡಿಸಲಾಗದ ಬಂಧನವಾಗಿದ್ದಳು. ತಪ್ಪಿಸಿಕೊಳ್ಳಲಾಗದ ಹಿಂಸೆಯಾಗಿದ್ದಳು.ಪರಿಣಾಮ ಕೊಲೆ ನಡೆದು ಹೋಗಿತ್ತು. ಪೂರ್ತಿ ವಿವರ ಇಲ್ಲಿದೆ ಓದಿ
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ
ಕೊಪ್ಪ ಪೊಲೀಸ್ ಸ್ಟೇಷನ್
ಶಿವಮೊಗ್ಗ ಜಿಲ್ಲೆ ರಿಪ್ಪನ್ ಪೇಟೆ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಬರುವ ಹೆದ್ದಾರಿಪುರದ ಬಳಿ ಮುಂಬಾಳು ಬಳಿಯಲ್ಲಿ ಕಾಮಗಾರಿಯೊಂದ ಗುಂಡಿಯಲ್ಲಿ ಟಾರ್ಪಲ್‌ನಲ್ಲಿ ಸಿಕ್ಕ ಯುವತಿಯ ನಾಪತ್ತೆ ಸಂಬಂಧ ಕೊಪ್ಪ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಯುವತಿ ಸೌಮ್ಯಳ ಅಕ್ಕ ಹಾಗೂ ಕುಟುಂಬಸ್ಥರು ನೀಡಿದ ದೂರಿನನ್ವಯ ಕೇಸ್ ದಾಖಲಿಸಿದ್ದ ಪೊಲೀಸರಿಗೆ ಆರಂಭಿಕ 20 ದಿನಗಳಲ್ಲಿ ಮಾಹಿತಿ ಸಿಕ್ಕಿರಲಿಲ್ಲ.
ಸುಜನ್ ಎಲ್ಲಿದ್ದೀಯಪ್ಪ
ಆನಂತರ ಮೊಬೈಲ್ ನಂಬರ್‌ನ ಲೊಕೇಶನ್ ಹಾಗೂ ಸಿಡಿಆರ್ ತೆಗೆಸಿದ್ದಾರೆ. ಈ ವೇಳೆ ಯುವತಿಯ ಲಾಸ್ಟ್ ಲೊಕೇಶನ್ ಶಿವಮೊಗ್ಗದ ಕಡೆ ತೋರಿಸಿದೆ. ಜೊತೆಯಲ್ಲಿ ಆಕೆಯ ಲಾಸ್ಟ್ ಕಾಲ್ ಸಾಗರದ ತಾಳಗುಪ್ಪ ಮೂಲದ ಸುಜನ್ ಎಂಬವನಿಗೆ ಬಂದಿರುವುದು ಗೊತ್ತಾಗಿದೆ. ಈ ವೇಳೆ ಸೌಮ್ಯಳ ಕುಟುಂಬಸ್ಥರ ಬಳಿ ವಿಚಾರಿಸಿದಾಗ ಸುಜನ್ ಸೌಮ್ಯಳ ಲವರ್ ಎಂದು ತಿಳಿದುಬಂದಿದೆ. ಆತನಿಗೆ ಫೋನಾಯಿಸಿದ ಪೊಲೀಸರು ಸುಜನ್ ಎಲ್ಲಿದ್ದೀಯಪ್ಪ, ಸೌಮ್ಯ ಎಲ್ಲಿದ್ದಾಳಪ್ಪ ಎಂದಿದ್ದಾರೆ. ಇದಕ್ಕೆ ಉತ್ತರವಾಗಿ ಆತ ತಾನು ಕೆಲಸದಲ್ಲಿರುವುದಾಗಿ ಹೇಳಿ ನಾಳೆ ಸ್ಟೇಷನ್‌ಗೆ ಬರುವುದಾಗಿ ಹೇಳಿದ್ದ. ಮೊದ ಮೊದಲು ಆತನ ಮಾತನ್ನ ನಂಬಿದ ಪೊಲೀಸರಿಗೆ ಸುಜನ್ ಸಾಕಷ್ಟು ಆಟವಾಡಿಸಿದ್ದ ಎನ್ನಲಾಗಿದೆ. ಆ ಬಳಿಕ ಪೊಲೀಸರು ಆತನನ್ನ ವಶಕ್ಕೆ ಪಡೆದು ವಿಚಾರಿಸಿದಾಗ ಆತ ಸೌಮ್ಯಳನ್ನ ಕೊಲೆ ಮಾಡಿ ಮಣ್ಣು ಮಾಡಿರುವ ವಿಚಾರ ತಿಳಿಸಿದ್ದ. ಯಾವಾಗ ಸೌಮ್ಯ ಮಿಸ್ಸಿಂಗ್ ಆಗಿಲ್ಲ. ಕೊಲೆಯಾಗಿದ್ದಾಳೆ ಎಂದು ಗೊತ್ತಾಯ್ತು ಕೊಪ್ಪ ಪೊಲೀಸರು ಶಿವಮೊಗ್ಗ ಜಿಲ್ಲೆ ಸಾಗರಕ್ಕೆ ಬಂದಿದ್ದಾರೆ. ಕಾನೂನು ಪರಿಮಿತಿಯೊಳಗೆ ಕೇಸ್ ಶಿವಮೊಗ್ಗ ಪೊಲೀಸರಿಗೆ ಹ್ಯಾಂಡ್ ಓವರ್ ಆಗಿದೆ.
ಆತನೇಕೆ ಕೊಂದ ಪ್ರೀತಿಯನ್ನ
ಅಂದಹಾಗೆ ಸೌಮ್ಯಳನ್ನ ಕೊಲೆ ಮಾಡುವಷ್ಟು ಮನಸ್ಥಿತಿ ಏಕೆ ಬಂದಿತ್ತು ಸುಜನ್‌ಗೆ ಎಂಬುದು ಪ್ರಶ್ನೆಯಾಗಿತ್ತು. ಪೊಲೀಸರು ಈ ಬಗ್ಗೆ ವಿಚಾರಿಸಿದಾಗ ಆತ ಆಕೆ ಮದುವೆಯಾಗು ಎಂದು ಪೀಡಿಸ್ತಿದ್ದಳು ಆಕೆಯನ್ನ ಎಲ್ಲಾ ರೀತಿಯಲ್ಲಿಯು ಸಮಾಧಾನ ಮಾಡಲು ಪ್ರಯತ್ನಿಸಿದೆ. ಆದರೆ ಆಕೆ ಹಠಕ್ಕೆ ಬಿದ್ದಳು.ಈ ವೇಳೆ ಜಗಳವಾಗಿ ಕೊಂದು ಬಿಟ್ಟೆ ಎಂದು ಹೇಳಿದ್ದ ಎನ್ನುತ್ತದೆ ಪೊಲೀಸ್ ಮೂಲ. ಇಬ್ಬರು ಪರಸ್ಪರ ಪ್ರೀತಿಸಿದವರು, ಎರಡು ವರ್ಷಗಳಿಂದ ಪ್ರಣಯದ ಹಕ್ಕಿಗಳಾಗಿದ್ದವರಲ್ಲಿ ಮದುವೆಯ ವಿಚಾರ ಏಕೆ ಕೊಲೆಗೆ ನಾಂದಿ ಹಾಡಿತು ಎನ್ನುವುದಕ್ಕೆ ಉತ್ತರ ಹೊರಟಾಗ ಸಿಕ್ಕಿದ್ದು, ಸುಜನ್‌ಗೆ ಆಕೆಯನ್ನ ಮದುವೆಯಾಗುವುದು ಇಷ್ಟವಿರಲಿಲ್ಲ ಎನ್ನುವುದು.
ಪ್ರೀತಿ ಆರಂಭವಾಗಿದ್ದು ಎಲ್ಲಿಂದ
ಸುಜನ್ ಫೈನಾನ್ಸ್ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ. ಹಾಗಾಗಿ ಸಾಲ ರಿಕವರಿಗೆ ಎಲ್ಲಾ ಕಡೆ ಓಡಾಡುತ್ತಿದ್ದ. ಹಾಗೆ ಓಡಾಡುತ್ತಿದ್ದಾಗ ಫೈನಾನ್ಸ್ ಕೊಟ್ಟಿದ್ದ ಮನೆಯೊಂದರಲ್ಲಿ ಯುವತಿ ಸೌಮ್ಯ ಪರಿಚಯವಾಗಿದ್ದಾಳೆ ಎನ್ನಲಾಗಿದೆ. ಎರಡು ವರ್ಷದ ಹಿಂದೆ ಸಿಕ್ಕ ಸೌಮ್ಯ ಸುಜನ್ ಬಾಳಲ್ಲಿ ತಂಗಾಳಿ ಮೂಡಿಸಿದ್ದಳು. ಪರಸ್ಪರ ಪ್ರೀತಿಸುತ್ತಿದ್ದ ಇವರ ಪ್ರೀತಿಯನ್ನ ಕೊಪ್ಪ, ತೀರ್ಥಹಳ್ಳಿ, ಹೊನ್ನಾಳಿ ಸಾಗರ ಹೀಗೆ ಹಲವು ಪೇಟೆಗಳು ಕಂಡಿವೆ. ಆದರೆ ಯಾವಾಗ ಮದುವೆ ವಿಚಾರ ಇಬ್ಬರ ನಡುವೆ ಪ್ರಸ್ತಾಪವಾಯಿತೋ ಪ್ರೀತಿ ಹಳಸಲು ಆರಂಬಿಸಿದೆ. ಆಗ ಸುಜನ್ ಸೌಮ್ಯಳನ್ನ ಅವೈಡ್ ಮಾಡಲು ಆರಂಭಿಸಿದ್ದಾನೆ. ಈ ನಡುವೆ ತೀರ್ಥಹಳ್ಳಿಯಲ್ಲಿ ಕೆಲಸಕ್ಕಿದ್ದ ಸುಜನ್ ಹೊನ್ನಾಳಿಗೆ ಅಲ್ಲಿಂದ ಸಾಗರಕ್ಕೆ ವರ್ಗಾವಣೆ ಗೊಂಡಿದ್ದ. ಆದರೆ ಸುಜನ್ ಜೊತೆಗೆ ಜೀವನದ ಕನಸು ಕಂಡಿದ್ದ ಸೌಮ್ಯ ಆತ ಹೋದ ಕಡೆಗೆಲ್ಲಾ ಹೋಗಿ ಬಂದು ಮಾಡುತ್ತಿದ್ದಳು. ಅಲ್ಲದೆ ಭವಿಷ್ಯ ಕನಸನ್ನ ಅವನ ಮುಂದಿಟ್ಟು ಮದುವೆಯ ಪ್ರಸ್ತಾಪ ಮಾಡುತ್ತಿದ್ದಳು. ಆದರೆ ಇತ್ತ ಕಾರಣ ಹೇಳಿಕೊಂಡೆ ಬಂದಿದ್ದ ಸುಜನ್.
ಪ್ರೀತಿಸಿದವರು ತಿರಸ್ಕರಿಸಿದಾಗ?
ಹೀಗೆ ಸುಜನ್ ತಿರಸ್ಕಾರ ಭಾವನೆಯಲ್ಲಿ ನೋಡುತ್ತಿದ್ದಾಗ ಸೌಮ್ಯಗಳಿಗೆ ಆತ ಇನ್ನೊಬ್ಬಳ ಜೊತೆಗೆ ಸಲುಗೆಯಲ್ಲಿರುವ ವಿಚಾರವೂ ಗೊತ್ತಾಗಿದೆ. ಆಗ ಆಕೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಈ ವಿಚಾರ ಕೊಪ್ಪ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿತ್ತು. ಅಲ್ಲಿ ರಾಜಿ ಸಂಧಾನ ಎರ್ಪಟ್ಟು ಸುಜನ್ ಮದುವೆಯಾಗಲು ಒಂದು ವರ್ಷದ ಸಮಯ ಕೇಳಿದ್ದ ಎಂಬ ಮಾಹಿತಿಯಿದೆ. ಹಿಂದೊಮ್ಮೆ ಫೋನ್ ನಂಬರ್ ತೆಗೆದುಕೊಂಡು ಮೊಬೈಲ್ ನಲ್ಲಿ ಸೌಮ್ಯ ಎಂದು ಸೇವ್ ಮಾಡಿಕೊಂಡು ಪ್ರೀತಿ ಆರಂಭಿಸಿದ್ದ ಸುಜನ್‌ಗೆ ಆಕೆ ಆತ್ಮಹತ್ಯೆಗೆ ಯತ್ನಿಸುವ ಹೊತ್ತಿಗೆ ಸೌಮ್ಯ ಬೇಡವಾಗಿದ್ದಳು. ಸುಂದರ ಹುಡುಗಿ ಕಾಡುವ ಪ್ರೇಯಸಿಯಾಗಿದ್ದಳು.
ಆತ್ಮಹತ್ಯೆಗೆ ಯತ್ನಿಸಿದ್ದ ಸೌಮ್ಯ
ಮದುವೆಯಾಗಲು ವರ್ಷದ ಟೈಂ ಕೇಳಿದ್ದ ಸುಜನ್ ಆನಂತರವೂ ಸೌಮ್ಯಳ ವಿಚಾರದಲ್ಲಿ ನೆಗ್ಲೆಟ್ ಮಾಡಿದ್ದ, ಹೀಗಾಗಿ ಬೇಸತ್ತ ಸೌಮ್ಯ ಮತ್ತೆ ಸುಜನ್‌ನನ್ನ ಹುಡುಕಿಕೊಂಡು ಬರಲು ಆರಂಭಿಸಿದ್ದಳು. ಈ ನಡುವೆ ಆತನಿಗೆ ಇನ್ನೊಬ್ಬಳಿದ್ದಾಳೆ ಎಂಬ ವಿಚಾರವೂ ಸೌಮ್ಯ ಹಾಗೂ ಸುಜನ್ ನಡುವೆ ಗಂಭೀರ ವಿಚಾರವಾಗಿ ಪರಿಣಮಿಸಿತ್ತು. ಕಳೆದ ಜೂನ್ ಮೂವತ್ತರಂದು ಸಹ ಸೌಮ್ಯ ಸಾಗರಕ್ಕೆ ಬಂದು ಸುಜನ್ ಬಳಿ ಮದುವೆಯಾಗಿ ಎಂದು ಪೀಡಿಸಿದ್ದಾಳೆ. ಇಲ್ಲವಾದರೆ ಗಲಾಟೆ ಮಾಡುವುದಾಗಿ ಎಚ್ಚರಿಸಿದ್ದಾಳೆ. ಆಗ ಹೀಗೋ ಹಾಗೋ ಮಾಡಿ ಸುಜನ್ ಅವಳನ್ನ ಸಾಗು ಹಾಕಿದ್ದ. ಸೌಮ್ಯಳ ಕುಟುಂಬಸ್ಥರು ಹೇಳುವ ಪ್ರಕಾರ, ಹೀಗೆ ಆಕೆ ಬಂದಾಗೆಲ್ಲಾ ಸಾಗು ಹಾಕುತ್ತಿದ್ದ ಸುಜನ್ ಕುಟುಂಬಸ್ಥರಿಗೂ ಕರೆ ಮಾಡಿ ಈಕೆಯನ್ನ ಕರೆದುಕೊಂಡು ಹೋಗಿ ಇಲ್ಲವಾದರೆ ಹೊಡೆದು ಹಾಕುತ್ತೀನಿ ಅಂತೆಲ್ಲಾ ಹೇಳುತ್ತಿದ್ದನಂತೆ. ಅಲ್ಲದೆ ಸುಜನ್ ಆಕೆಯ ಬಳಿ ಒಂದಿಷ್ಟು ದುಡ್ಡು ಸಹ ತೆಗೆದುಕೊಂಡಿದ್ದನಂತೆ
ನಡೆದಿದ್ದೇನು ಕೊಲೆಯಾದ ದಿನ
ಹೀಗೆ ಸೌಮ್ಯಳ ವಿಚಾರ ಸುಜನ್‌ಗೆ ಕಗ್ಗಂಟಾಗಿ ಹೋಗಿತ್ತು. ಆದರೆ ಸೌಮ್ಯ ಮಾತ್ರ ಆತನನ್ನು ಮದುವೆಯಾಗಿಯೇ ಸಿದ್ದ ಎಂದು ಪಟ್ಟು ಹಿಡಿದಿದ್ದಳು. ಅದೇ ಕಾರಣಕ್ಕೆ ಜುಲೈ ಎರಡಂದು ಸಹ ಸಾಗರಕ್ಕೆ ಬಂದಿದ್ದಳು. ಅಲ್ಲಿ ಸುಜನ್ ಆಕೆಯ ಕೈಗೆ ಸಿಗದೇ ಓಡಾಡಿದ್ದ. ಆ ಬಳಿಕ ಸೌಮ್ಯ ಸುಜನ್‌ನನ್ನ ಹೆದರಿಸಿದ್ದಾಳೆ . ಪರಿಣಾಮ ಒತ್ತಡಕ್ಕೆ ಬಿದ್ದ ಸುಜನ್ ಸಾಗರ ಪೇಟೆಯಲ್ಲಿ ಆಕೆಗೆ ಸಿಕ್ಕಿದ್ದಾನೆ. ಈ ವೇಳೆಯು ಅವರಿಬ್ಬರ ನಡುವೆ ಗಲಾಟೆಯಾಗಿದ್ದು, ಸ್ಥಳೀಯರು ಬಿಡಿಸಿ ಕಳುಹಿಸಿದ್ದರು ಎಂದು ಸೌಮ್ಯಳ ಕುಟುಂಬಸ್ಥರು ಆರೋಪಿಸ್ತಾರೆ. ಹೀಗೆ ಗಲಾಟೆ ಮಾಡಿಕೊಂಡ ಇಬ್ಬರು ಬಳಿಕ ಬೈಕ್‌ನಲ್ಲಿ ರಿಪ್ಪನ್‌ಪೇಟೆ ಕರೆದುಕೊಂಡು ಬಂದು ಬಸ್ ಹತ್ತಲು ಸೌಮ್ಯಗೆ ತಿಳಿಸಿದ್ದಾನೆ. ಆದರೆ ಅವಳು ಒಲ್ಲೆ ಎಂದಿದ್ದಾಳೆ. ಬಳಿಕ ಇಬ್ಬರು ಹೆದ್ದಾರಿಪುರ ಮಾರ್ಗವಾಗಿ ಬಂದಿದ್ದಾರೆ. ಈ ವೇಳೆ ಮತ್ತೆ ಬೈಕ್‌ನಿಂದ ಸೌಮ್ಯಳನ್ನ ಇಳಿಸಿದ ಸುಜನ್ ಕೊಪ್ಪಗೆ ಬಸ್ ಹತ್ತಿಕೊಂಡು ಹೋಗು ಎಂದಿದ್ದ. ಬಹುಶಃ ಆಕ್ಷಣಕ್ಕೆ ಒಪ್ಪಿ , ಆ ಬಳಿಕ ನಾಲ್ಕು ಜನರನ್ನ ಸೇರಿಸಿ ಪಂಚಾಯ್ತಿ ಮಾಡಿಸಿದ್ದರೆ ಸೌಮ್ಯ ಹೆಣವಾಗುತ್ತಿರಲ್ಲವೇನೋ? ಆದರೆ ಸೌಮ್ಯ ಸುಜನನ್ನ ಬಿಟ್ಟು ಹೋಗಲು ತಯಾರಿಲಿಲ್ಲ. ಸುಮಾರು ಒಂದು ಕಿಲೋಮೀಟರ್‌ವರೆಗೂ ಸುಜನ್ ಹಾಗೂ ಆತನ ಬೈಕ್‌ನ್ನ ಬಿಟ್ಟು ನಡೆದು ಹೊರಟ ಸೌಮ್ಯ ಸಿಟ್ಟಿನಲ್ಲಿದ್ದಳು. ಈ ವೇಳೆ ಅವಳನ್ನ ಹಿಂಬಾಲಿಸಿದ ಸುಜನ್ ಸೌಮ್ಯಳನ್ನ ಮನೆಗೆ ಹೋಗು ಹೋಗು ಎಂದು ಪೀಡಿಸಿದ್ದಾನೆ. ಇಬ್ಬರ ನಡುವೆ ಸಾಕಷ್ಟು ಮಾತುಕತೆ ನಡೆದಿದೆ. ಅಂತಿಮವಾಗಿ ಮತ್ತೆ ಗಲಾಟೆಯಾಗಿದೆ. ಸಿಟ್ಟಿನಲ್ಲಿ ಮುಷ್ಟಿಕಟ್ಟಿ ಸೌಮ್ಯಳ ಕುತ್ತಿಗೆಗೆ ಗುದ್ದಿದ್ದಾನೆ. ಆತನ ಏಟಿಗೆ ಅವಳು ಪ್ರಜ್ಞೆ ತಪ್ಪಿ ಅಲ್ಲೆ ಬಿದ್ದಿದ್ದಾಳೆ. ಮಳೆಯ ನಡುವೆ ಸೌಮ್ಯ ಬಿದ್ದಿದ್ದನ್ನ ನೋಡಿ ಗಾಬರಿ ಗೊಂಡ ಸುಜನ್ ಅವಳನ್ನ ಎಳೆದುಕೊಂಡು ಅಲ್ಲಿಯೇ ಕಾಡಿನ ಬಳಿ ಹೋಗಿದ್ದಾನೆ. ಅಲ್ಲಿ ಅವಳಿಗೆ ಮತ್ತೆ ಪ್ರಜ್ಞೆ ಬಂದಿದೆ. ಅದಾಗಲೇ ತಾಳ್ಮೆ ಮೀರಿ ನಿಂತಿದ್ದ ಸುಜನ್ ಅವಳೊಂದಿಗೆ ಸಿಟ್ಟಲ್ಲೆ ಮಾತನಾಡ್ತಾ ಕುತ್ತಿಗೆ ಹಿಸುಕಿದ್ದಾನೆ. ಆ ಬಳಿಕ ಕಾಲಿನಿಂದ ಕುತ್ತಿಗೆ ಮೆಟ್ಟಿ ಸಾಯಿಸಿದ್ದಾನೆ.
ಪ್ರೀತಿಯ ಕೊಂದ ಕೊಲೆಗಾರ
ಹೀಗೆ ಕೊಲೆ ಮಾಡಿದ್ದ ಸುಜನ್ ಆ ಬಳಿಕ ಅವಳ ಹೆಣವನ್ನ ಅಲ್ಲಿಯೆ ಬಿಟ್ಟು ಸಾಗರಕ್ಕೆ ಹೋಗಿ ಫೈನಾನ್ಸ್‌ನ ದುಡ್ಡು ಕಟ್ಟಿ ಅಲ್ಲಿಂದ ಕಾರಿನಲ್ಲಿ ವಾಪಸ್ ಬಂದು ಹೆಣವನ್ನು ಟಾರ್ಪಲ್‌ವೊಂದರಿಂದ ಸುತ್ತಿ ಮುಂಬಾಳು ಬಳಿಯ ರೈಲ್ವೆ ಹಳಿ ಬಳಿಯಲ್ಲಿ ಕಾಮಗಾರಿ ನಡೆಯುತ್ತಿದ್ದ ಜಾಗದಲ್ಲಿ ಹೂತು ಹೊರಟಿದ್ದಾನೆ. ಮರುದಿನದಿಂದ ಎಂದಿನಂತೆ ಕೆಲಸ ಮಾಡಿಕೊಂಡಿದ್ದ. ಇದೀಗ ಸತ್ಯ ಹಾಗೂ ಮೃತದೇಹ ಮಣ್ಣಿನಿಂದ ಹೊರಬಂದಿದೆ. ಸುಜನ್ ಪ್ರೀತಿಸಿದ್ದನಾ ಅಥವಾ ಹೆಣ್ಣೊಬ್ಬಳ ಸಂಗ ಬಯಸಿ ಸೌಮ್ಯ ಬಾಳಲ್ಲಿ ಆಟವಾಡಿದ್ದನ್ನಾ ಗೊತ್ತಿಲ್ಲ. ಇರುವುದೆಲ್ಲಾ ಬಿಟ್ಟು ಅವಳ ಸಂಘ ಮಾಡಿದ ಸುಜನ್ ಇನ್ನೊಬ್ಬಳ ಕಡೆಗೆ ತುಡಿದು, ಇವಳನ್ನ ಕೊಲೆ ಮಾಡಿದನಾ? ಮದುವೆಯ ಹಠಕ್ಕೆ ಬಿದ್ದು ಅತಿಯಾಗಿ ಕಾಡಿ ಸೌಮ್ಯ ಜೀವ ಕಳೆದುಕೊಂಡಳಾ? ಒಟ್ಟಾರೆ ಇಬ್ಬರ ನಡುವೆ ಹುಟ್ಟಿದ್ದ ಪ್ರೀತಿ ಅವರ ಬಾಳಿಗೆ ವಿಷವಾಗಿದೆ. ಪ್ರೀತಿಸುವ ಮನಸ್ಸುಗಳು ಈ ಪ್ರಕರಣದಿಂದ ಎಚ್ಚರವಹಿಸಬೇಕು.