Gold theft ಶಿವಮೊಗ್ಗ: ದೀಪಾವಳಿ ಹಬ್ಬ ಮುಗಿಸಿಕೊಂಡು ಬಸ್‌ನಲ್ಲಿ ತಮ್ಮ ಮನೆಗೆ ವಾಪಸ್ ತೆರಳುತ್ತಿದ್ದ ಮಹಿಳೆಯೊಬ್ಬರ ವ್ಯಾಲಿಟಿ ಬ್ಯಾಗ್‌ನಲ್ಲಿದ್ದ ಸುಮಾರು ₹ 1.5 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ಮೊಬೈಲ್ ಫೋನ್ ಕಳ್ಳತನವಾಗಿದೆ.
ಭದ್ರಾವತಿ ತಾಲೂಕಿನ ಹೊಳೆಹೊನ್ನೂರಿನ ನಿವಾಸಿಯಾಗಿದ್ದು, ಸದ್ಯ ಕೋಲಾರ ಜಿಲ್ಲೆಯ ಕೆಜಿಎಫ್‌ನಲ್ಲಿ ನೆಲೆಸಿರುವ ಮಹಿಳೆಯೊಬ್ಬರು ದೀಪಾವಳಿ ಹಬ್ಬಕ್ಕಾಗಿ ತಮ್ಮ ಪತಿಯೊಂದಿಗೆ ಹೊಳೆಹೊನ್ನೂರಿನ ಮನೆಗೆ ಆಗಮಿಸಿದ್ದರು. ಹಬ್ಬ ಮುಗಿದ ನಂತರ, ವಾಪಸ್ ಕೆಜಿಎಫ್‌ಗೆ ಹೋಗಲು ರಾತ್ರಿ 9:25 ರ ಸುಮಾರಿಗೆ ಮನೆಯಿಂದ ಹೊರಟಿದ್ದರು.
ರಾತ್ರಿ 9:50 ರ ಸುಮಾರಿಗೆ ಖಾಸಗಿ ಬಸ್‌ನಲ್ಲಿ ಶಿವಮೊಗ್ಗಕ್ಕೆ ಬಂದು ಇಳಿದ ದಂಪತಿ, ನಂತರ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಬೆಂಗಳೂರು ಕಡೆಗೆ ಹೋಗುವ ಬಸ್‌ಗಾಗಿ ಕಾಯುತ್ತಿದ್ದರು.ಸುಮಾರು 9:58 ರ ಸುಮಾರಿಗೆ ಬೆಂಗಳೂರು ಕಡೆಗೆ ಹೋಗುವ ಕೆಎಸ್‌ಆರ್‌ಟಿಸಿ ಬಸ್ ಬಂದಾಗ, ಬಸ್‌ನಲ್ಲಿ ವಿಪರೀತ ಜನದಟ್ಟಣೆ ಇತ್ತು. ದಂಪತಿಗಳು ರಶ್ ಇರುವಾಗಲೇ ಬಸ್ ಹತ್ತಿ ಸೀಟ್ ಹಿಡಿಯಲು ಹೋದಾಗ, ಮಹಿಳೆಯ ಬಳಿ ಇದ್ದ ಬ್ಯಾಗ್‌ನ ಜಿಪ್ ತೆರೆದಿರುವುದು ಕಂಡುಬಂದಿದೆ. ತಕ್ಷಣ ಪರಿಶೀಲಿಸಿದಾಗ, ಬ್ಯಾಗ್‌ನೊಳಗೆ ಇಟ್ಟಿದ್ದ ಚಿಕ್ಕ ವ್ಯಾಲಿಟಿ ಬ್ಯಾಗ್ ಕಣ್ಮರೆಯಾಗಿರುವುದು ಅವರ ಗಮನಕ್ಕೆ ಬಂದಿದೆ.
ನೋಡಿದಾಗ ಸುಮಾರು 4 ಗ್ರಾಂ ತೂಕದ ಚಿನ್ನದ ಜುಮಕಿ, 14 ಗ್ರಾಂ ತೂಕದ ಚಿನ್ನದ ಸರ. 11 ಗ್ರಾಂ ತೂಕದ ಚಿನ್ನದ ಸರ,16 ಗ್ರಾಂ ತೂಕದ ಚಿನ್ನದ ಓಲೆ ಮತ್ತು ಜುಮಕಿ,ಒಂದು ಮೊಬೈಲ್ ಫೋನ್ ಕಳುವಾಗಿರುವುದು ತಿಳಿದು ಬಂದಿದೆ. ಈ ಸಂಬಂಧ ಮಹಿಳೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

