Daylight Burglary : ಶಿವಮೊಗ್ಗ : ಹೊಸನಗರ ತಾಲೂಕಿನ ಬೇಳಂದೂರು ಗ್ರಾಮದಲ್ಲಿ ಹಗಲು ಹೊತ್ತಿನಲ್ಲೇ ಕಳ್ಳರು ಮನೆಗೆ ನುಗ್ಗಿ, ಸಾವಿರಾರು ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ನಗದು ಹಣವನ್ನು ದೋಚಿರುವ ಘಟನೆ ತಡವಾಗಿ ವರದಿಯಾಗಿದೆ. ಈ ಕಳ್ಳತನ ಪ್ರಕರಣದಲ್ಲಿ ಒಟ್ಟು 31,500 ಮೌಲ್ಯದ ವಸ್ತುಗಳು ಕಳುವಾಗಿರುವ ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ
ಕಳ್ಳತನವಾದ ದಿನ ದೂರುದಾರ ಮಹಿಳೆ ಕೋಣಂದೂರಿನ ಗೇರ್ ಫ್ಯಾಕ್ಟರಿಗೆ ಕೆಲಸಕ್ಕೆ ಹೋಗಿದ್ದರು. ಸಂಜೆ 6:30 ಗಂಟೆಗೆ ಅವರು ಮನೆಗೆ ಹಿಂದಿರುಗಿದಾಗ ಅವರಿಗೆ ಆಘಾತ ಎದುರಾಗಿತ್ತು. ಯಾರೋ ಮನೆಯ ಹಿಂಭಾಗದ ಮೇಲ್ಛಾವಣಿಯ ಹಂಚುಗಳನ್ನು ತೆಗೆದಿರುವುದು ಮತ್ತು ರೂಮಿನಲ್ಲಿದ್ದ ಗಾಡ್ರೇಜ್ನ ಬಾಗಿಲು ತೆರೆದಿರುವುದು ಅವರ ಗಮನಕ್ಕೆ ಬಂದಿದೆ.
ನಂತರ ಒಳಗೆ ಹೋಗಿ ನೋಡಿದಾಗ ಗಾಡ್ರೇಜ್ನಲ್ಲಿದ್ದ ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು, ಕಳ್ಳರು ಗಾಡ್ರೇಜ್ನಲ್ಲಿದ್ದ 4 ಗ್ರಾಂ ತೂಕದ ಒಂದು ಜೊತೆ ಬಂಗಾರದ ಕಿವಿ ಓಲೆ (ಅಂದಾಜು ಬೆಲೆ 28,000), 20 ಗ್ರಾಂ ತೂಕದ 2 ಬೆಳ್ಳಿ ಜೈನ್ ಸರ (ಅಂದಾಜು ಬೆಲೆ 2,500) ಮತ್ತು ಸುಮಾರು 500 ಚಿಲ್ಲರೆ ಹಣವನ್ನು ಕದ್ದೊಯ್ದಿದ್ದಾರೆ. ಒಟ್ಟಾರೆಯಾಗಿ, 31,500 ಮೌಲ್ಯದ ಕಳವು ನಡೆದಿದೆ ಎಂದು ಆರೋಪಿಸಿದ್ದಾರೆ.

