Current shock : ಶಿವಮೊಗ್ಗ ತಾಲೂಕಿನ ಆಯನೂರು ಹೋಬಳಿಯ ನಾಗರಬಾವಿ ಗ್ರಾಮದಲ್ಲಿ ಜಮೀನಿನಲ್ಲಿ ಹಾದು ಹೋಗಿರುವ ಹೈಟೆನ್ಷನ್ ವಿದ್ಯುತ್ ತಂತಿ ತಗುಲಿ ತಾಯಿ ಮತ್ತು ಮಗ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಗಾಯಗೊಂಡವರನ್ನು ಆಯನೂರು ಕೋಟೆ ನಿವಾಸಿಗಳಾದ ತಸ್ಮಿಯಾ ಮತ್ತು ಅವರ ಪುತ್ರ ಮೊಹಮ್ಮದ್ ಅನೀಸ್ ಉಲ್ಲಾ ಎಂದು ಗುರುತಿಸಲಾಗಿದೆ. ತಾಯಿ-ಮಗ ತಮ್ಮ ಜಮೀನಿನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಜಮೀನಿನ ಮಧ್ಯದಲ್ಲಿ ಹಾದುಹೋಗಿದ್ದ ಹೈಟೆನ್ಷನ್ ವಿದ್ಯುತ್ ತಂತಿ ನೆಲಕ್ಕೆ ತಗಲುತ್ತಿತ್ತು ಎನ್ನಲಾಗಿದೆ. ಮೊದಲು ಪುತ್ರ ಮೊಹಮ್ಮದ್ ಅನೀಸ್ ಉಲ್ಲಾ ಅವರಿಗೆ ತಂತಿ ತಗುಲಿ ವಿದ್ಯುತ್ ಶಾಕ್ ಹೊಡೆದಿದೆ. ಅವರನ್ನು ರಕ್ಷಿಸಲು ಹೋದ ತಾಯಿ ತಸ್ಮಿಯಾ ಅವರಿಗೂ ವಿದ್ಯುತ್ ಸ್ಪರ್ಶವಾಗಿದೆ.
ಸ್ಥಳೀಯರು ತಕ್ಷಣವೇ ಇಬ್ಬರನ್ನೂ ರಕ್ಷಿಸಿ ಆಸ್ಪತ್ರೆಗೆ ಸೇರಿಸಿದ್ದಾರೆ. ತಸ್ಮಿಯಾ ಅವರನ್ನು ಶಿವಮೊಗ್ಗದ ಸರ್ಜಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಪುತ್ರ ಮೊಹಮ್ಮದ್ ಅನೀಸ್ ಉಲ್ಲಾ ಗಂಭೀರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆ ಸಂಬಂಧ, ಮೆಸ್ಕಾಂ ಅಧಿಕಾರಿಗಳ ವಿರುದ್ಧ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Current shock

