Bk sanghameshwar ಭದ್ರಾವತಿ: ಈದ್ ಮಿಲಾದ್ ಹಬ್ಬದ ಸಂದರ್ಭದಲ್ಲಿ ನಾನು ಎಲ್ಲಾ ಧರ್ಮದಲ್ಲಿ ಹುಟ್ಟಬೇಕೆನ್ನುವ ಮಾತನ್ನು ಹೇಳಿದ್ದೆ ಆದರೆ ನನ್ನ ಮಾತಿನ ಅರ್ಥವನ್ನು ಸಂಪೂರ್ಣವಾಗಿ ತಿರುಚಲಾಗಿದೆ ಎಂದು ಭದ್ರಾವತಿ ಶಾಸಕ ಬಿಕೆ ಸಂಗಮೇಶ್ವರ್ ಹೇಳಿದರು.
ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈದ್ ಮಿಲಾದ್ ಹಬ್ಬದ ವೇಳೆ ತಾವು ಹಿಂದೂ, ಮುಸ್ಲಿಂ ಮತ್ತು ಕ್ರೈಸ್ತರಾಗಿ ಅವರವರ ಧಾರ್ಮಿಕ ಆಚರಣೆಗಳನ್ನು ಮಾಡಲು ಬಯಸುವುದಾಗಿ ಹೇಳಿದ್ದೆ. ಆದರೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಇದನ್ನು ತಿರುಚಿ ಕೇವಲ ಮುಸ್ಲಿಂ ಆಗಿ ಹುಟ್ಟುವ ಬಯಕೆ ವ್ಯಕ್ತಪಡಿಸಿದ್ದೇನೆ ಎಂದು ಅಪಪ್ರಚಾರ ಮಾಡುತ್ತಿವೆ ಎಂದು ಆರೋಪಿಸಿದರು.
Bk sanghameshwar’ನಿಜವಾದ ಹಿಂದೂಗಳೆಂದರೆ ಕಾಂಗ್ರೆಸಿಗರು
ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಈ ರೀತಿಯ ಅಪಪ್ರಚಾರ ಮಾಡುವ ಮೂಲಕ ಭದ್ರಾವತಿಯ ಶಾಂತಿಯನ್ನು ಹಾಳು ಮಾಡುತ್ತಿವೆ ಎಂದು ಸಂಗಮೇಶ್ವರ್ ಆಕ್ರೋಶ ವ್ಯಕ್ತಪಡಿಸಿದರು. “ನಾನು ಎಲ್ಲಾ ಹಬ್ಬಗಳಿಗೆ ದೇವಾಲಯಗಳಿಗೆ ಲಕ್ಷಾಂತರ ರೂಪಾಯಿ ಹಣವನ್ನು ನೀಡಿದ್ದೇನೆ. ವಿರೋಧ ಪಕ್ಷದವರ ಅಪಪ್ರಚಾರಕ್ಕೆ ಜನರು ತಕ್ಕ ಉತ್ತರ ನೀಡುತ್ತಾರೆ. ಮತದಾರರ ಆಶೀರ್ವಾದ ಇರುವವರೆಗೆ ಯಾರೂ ಏನೂ ಮಾಡಲು ಸಾಧ್ಯವಿಲ್ಲ. ನಿಜವಾದ ಹಿಂದೂಗಳೆಂದರೆ ಕಾಂಗ್ರೆಸಿಗರು, ಬೂಟಾಟಿಕೆ ಮಾಡುವವರು ಬಿಜೆಪಿ ಮತ್ತು ಜೆಡಿಎಸ್” ಎಂದು ಅವರು ಹೇಳಿದರು.
ಪಾಕಿಸ್ತಾನ ಪರ ಘೋಷಣೆ ಕೂಗಿದವರನ್ನು ಬೂಟಿನಿಂದ ಹೊಡೆದು ಒಳಗೆ ಹಾಕಿ’
ಸದನದಲ್ಲೂ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಹಿಂದೂ-ಮುಸ್ಲಿಂ ಎಂದು ಬಿಂಬಿಸಿ ಸಾರ್ವಜನಿಕರ ಹಣವನ್ನು ಹಾಳು ಮಾಡುತ್ತಿವೆ ಎಂದು ಸಂಗಮೇಶ್ವರ್ ದೂರಿದರು. “ಅಪಪ್ರಚಾರಕ್ಕೆ ಯಾರೂ ಕಿವಿಗೊಡಬಾರದು. ಒಂದು ವೇಳೆ ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ. ಇತ್ತೀಚೆಗೆ ಭದ್ರಾವತಿಯಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದವರಿಗೆ ಬೂಟಿನಿಂದ ಹೊಡೆದು ಒಳಗೆ ಹಾಕಬೇಕು” ಎಂದು ಅವರು ಹೇಳಿದರು.
ಮುಸ್ಲಿಮರ ಪರವಾಗಿ ನೀಡಿರುವ ಹೇಳಿಕೆ ತಮ್ಮ ವೈಯಕ್ತಿಕ ಅಭಿಪ್ರಾಯವಾಗಿದೆ. ಭದ್ರಾವತಿಯಲ್ಲಿ ಹಿಂದೂ ಮಹಾಸಭಾ ಗಣಪತಿ ಉತ್ಸವ ಶಾಂತಿಯುತವಾಗಿ ನಡೆಯುತ್ತದೆ. “ಮತಾಂತರಗೊಳ್ಳುವುದು ನನ್ನ ವೈಯಕ್ತಿಕ ವಿಚಾರ, ಯಾರೋ ಹೇಳಿದಂತೆ ನಾನು ಮತಾಂತರಗೊಳ್ಳಲು ಸಾಧ್ಯವಿಲ್ಲ. ಜೆಡಿಎಸ್ ಮತ್ತು ಬಿಜೆಪಿಗೆ ಬೇರೆ ಕೆಲಸವಿಲ್ಲ. ನನ್ನ ಹೇಳಿಕೆಯಿಂದ ಪಾಕಿಸ್ತಾನ ಪರ ಘೋಷಣೆ ಕೂಗಲಾಗಿದೆ ಎಂಬುದು ಸತ್ಯಕ್ಕೆ ದೂರವಾದುದ್ದು” ಎಂದರು .
ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ
ಜಿಎಸ್ಟಿ ಹಣ ಬಿಡುಗಡೆ, ರೈತರ ಸಾಲ ಮನ್ನಾ, ಉದ್ಯೋಗ ಸೃಷ್ಟಿಯ ಬಗ್ಗೆ ಬಿಜೆಪಿ ನಾಯಕರು ಮಾತನಾಡುವುದಿಲ್ಲ. ಕೇವಲ ಹಿಂದೂ-ಮುಸ್ಲಿಂ ಎಂದು ಹೇಳಿಕೊಂಡು ಸಮಾಜದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಸಂಗಮೇಶ್ವರ್ ಆರೋಪಿಸಿದರು. ವಿಐಎಸ್‌ಎಲ್ ಕಾರ್ಖಾನೆ ಅಭಿವೃದ್ಧಿಯಾಗಿಲ್ಲ. ನಾಲ್ಕು ಜನ ಕೇಂದ್ರ ಸಚಿವರು ಇಲ್ಲಿಗೆ ಬಂದರೂ ಕಾರ್ಖಾನೆ ಪುನರಾರಂಭಗೊಂಡಿಲ್ಲ. ಕೇಂದ್ರ ಸಚಿವರು ಈಗ ವಿಐಎಸ್‌ಎಲ್ ಅಭಿವೃದ್ಧಿ ಮಾಡುವುದಾಗಿ ಹೇಳಿರುವುದನ್ನು ಸ್ವಾಗತಿಸುವುದಾಗಿ ತಿಳಿಸಿದರು. ಎಂಪಿಎಂ ಕಾರ್ಖಾನೆಯನ್ನು ಎಲ್ ಆಂಡ್ ಟಿ ಮೂಲಕ ಅಭಿವೃದ್ಧಿ ಮಾಡಲು ಹೊರಟರೆ ಕೇಂದ್ರ ಅರಣ್ಯ ಇಲಾಖೆ ಅನುಮತಿ ನೀಡದೆ ಸತಾಯಿಸುತ್ತಿದೆ ಎಂದು ಅವರು ದೂರಿದರು.


