Bhadravathi Crime ಭದ್ರಾವತಿ: ಯುವಕನೊಬ್ಬನಿಗೆ ಅಪರಿಚಿತ ವ್ಯಕ್ತಿಯೊಬ್ಬ ಕೊಲೆ ಮಾಡಲು ಮೂರು ಲಕ್ಷ ರೂಪಾಯಿ ಸುಪಾರಿ ಆಫರ್ ನೀಡಲು ಯತ್ನಿಸಿ, ಆಫರ್ ನಿರಾಕರಿಸಿದ ಕಾರಣಕ್ಕೆ ಜೀವಬೆದರಿಕೆ ಹಾಕಿರುವ ಘಟನೆ ಭದ್ರಾವತಿಯ ಗ್ರಾಮವೊಂದರಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಹೊಸಮನೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರ ಯುವಕನು ತನ್ನ ಸ್ನೇಹಿತನೊಂದಿಗೆ ಮಾತನಾಡುತ್ತಿದ್ದಾಗ, ಆ ಸ್ನೇಹಿತನ ಕರೆ ಮೇರೆಗೆ ಮೂರನೇ ವ್ಯಕ್ತಿಯೊಬ್ಬ ಇವರನ್ನು ಸೇರಿಕೊಂಡಿದ್ದಾನೆ. ಆ ಸಂದರ್ಭದಲ್ಲಿ ಹಣಕಾಸಿನ ತೊಂದರೆಯ ಬಗ್ಗೆ ದೂರುದಾರರು ಹೇಳಿಕೊಂಡಾಗ, ಮೂರನೇ ವ್ಯಕ್ತಿಯು ಒಬ್ಬ ವ್ಯಕ್ತಿಯ ಕೊಲೆ ಮಾಡಲು ಮೂರು ಲಕ್ಷ ರೂಪಾಯಿ ನೀಡುವುದಾಗಿ ಆಮಿಷ ಒಡ್ಡಿದ್ದಾನೆ. ಒಂದು ಲಕ್ಷ ರೂಪಾಯಿ ಅಡ್ವಾನ್ಸ್ ನೀಡುವುದಾಗಿಯೂ ತಿಳಿಸಿದ್ದಾನೆ.
ಯಾರನ್ನು ಕೊಲೆ ಮಾಡಬೇಕು ಎಂದು ದೂರುದಾರರು ಪ್ರಶ್ನಿಸಿದಾಗ, ಸುಪಾರಿ ನೀಡಲು ಬಂದ ವ್ಯಕ್ತಿಯು ಅವರನ್ನು ಸ್ಥಳೀಯ ಬಡಾವಣೆಯೊಂದಕ್ಕೆ ಕರೆದುಕೊಂಡು ಹೋಗಿ, ಮನೆಯೊಂದನ್ನು ತೋರಿಸಿ ಆ ಮನೆಯಲ್ಲಿರುವ ವ್ಯಕ್ತಿಯನ್ನು ಕೊಲೆ ಮಾಡಬೇಕು ಎಂದು ಸೂಚಿಸಿದ್ದಾನೆ.
ಈ ಆಫರ್ಗೆ ಗಾಬರಿಗೊಂಡ ದೂರುದಾರರು, ನಾನು ಈ ರೀತಿಯ ಕೆಲಸ ಮಾಡುವುದಿಲ್ಲ ಎಂದು ಹೇಳಿ ಡೀಲ್ ತಿರಸ್ಕರಿಸಿ ಅಲ್ಲಿಂದ ಹೊರಡಲು ಯತ್ನಿಸಿದ್ದಾರೆ. ಆಗ ಆ ಸುಪಾರಿ ನೀಡಿದ ವ್ಯಕ್ತಿ ದೂರುದಾರರನ್ನು ತಡೆದು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಅಲ್ಲದೆ, “ಈ ಡೀಲಿನ ವಿಷಯವನ್ನು ನೀನು ಬಾಯಿ ಬಿಟ್ಟರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ” ಎಂದು ಜೀವಬೆದರಿಕೆ ಹಾಕಿ ಹೋಗಿದ್ದಾನೆ ಎಂದು ಎಫ್ಐಆರ್ನಲ್ಲಿ ಆರೋಪಿಸಲಾಗಿದೆ.

