ಮನುಷ್ಯರನ್ನು ವಿಭಜಿಸುವವರು ಧರ್ಮ ದ್ರೋಹಿಗಳು | ಸಿಎಂ ಸಿದ್ದರಾಮಯ್ಯ
Those who divide human beings in the name of caste and religion are traitors,
SHIVAMOGGA | MALENADUTODAY NEWS | ಮಲೆನಾಡು ಟುಡೆ | Nov 29, 2024
ಜಾತಿ ಧರ್ಮದ ಹೆಸರಲ್ಲಿ ಮನುಷ್ಯರನ್ನು ವಿಭಜಿಸುವವರು ಧರ್ಮ ದ್ರೋಹಿಗಳು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ಬಳ್ಳಾರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ಯಾವ ಧರ್ಮವೂ ದ್ವೇಷವನ್ನು ಬೋಧನೆ ಮಾಡುವುದಿಲ್ಲ. ಪ್ರೀತಿ, ಮಾನವೀಯತೆ ಎಲ್ಲ ಧರ್ಮಗಳ ಸಾರ ಎಂದರು. ಧರ್ಮದ ಅರ್ಥ ಬಹಳ ಸರಳ. ಬಸವಣ್ಣನವರು ಹೇಳಿರುವಂತೆ ದಯೆಯೇ ಧರ್ಮದ ಮೂಲ. ದ್ವೇಷ ಅಸೂಯೆ ಇದ್ದ ಕಡೆ ಧರ್ಮ ಇರುವುದಿಲ್ಲ. ದ್ವೇಷದಿಂದ ಸಮಾಜ ಛಿದ್ರವಾಗುತ್ತದೆ ಎಂದರು. ನಮ್ಮ ಧರ್ಮವನ್ನು ಪಾಲಿಸೋಣ. ಎಲ್ಲ ಧರ್ಮಗಳನ್ನೂ ಸಹಿಸಿಕೊಳ್ಳುವ ಸಹಿಷ್ಣುತೆ ಬೆಳೆಸಿಕೊಳ್ಳಿ ಎನ್ನುವುದೇ ನಮ್ಮ ಸಂವಿಧಾನದ ಮಹಾನ್ ಮೌಲ್ಯ. ಇದನ್ನು ಪಾಲಿಸುವುದೇ ನಾವು ಸ್ವಾಮಿ ವಿವೇಕಾನಂದರಿಗೆ, ಸಂವಿಧಾನಕ್ಕೆ ನೀಡುವ ಮಹೋನ್ನತ ಗೌರವ ಎಂದರು.
ನಾನು ಯಾವುದೇ ಧರ್ಮವನ್ನು ಒಲೈಸುವುದಿಲ್ಲ ಎಲ್ಲ ಧರ್ಮವನ್ನು ಪ್ರೀತಿಸುತ್ತೇನೆ
ನಾನು ಯಾವುದೇ ಒಂದು ಧರ್ಮವನ್ನು ಓಲೈಸುವುದಿಲ್ಲ. ನಾನು ಹಿಂದುಗಳನ್ನು ಪ್ರೀತಿಸುವಂತೆಯೇ ಕ್ರೈಸ್ತ, ಮುಸ್ಲಿಂ, ಜೈನ, ಬೌದ್ಧ ಧರ್ಮದವರೆಲ್ಲರನ್ನೂ ಪ್ರೀತಿಸುತ್ತೇನೆ ಎಂದು ವಿವರಿಸಿದರು. ಹಿಂದುಳಿದವರು, ಅಲ್ಪಸಂಖ್ಯಾತರು, ಶೂದ್ರರು, ದಲಿತರು ಮತ್ತು ಇಡೀ ಮಹಿಳಾ ಕುಲವನ್ನು ಈ ಜಾತಿ ವ್ಯವಸ್ಥೆ ಶಿಕ್ಷಣದಿಂದ ವಂಚಿತರನ್ನಾಗಿ ಮಾಡಿತ್ತು. ಆದರೆ, ನಮ್ಮ ಸಂವಿಧಾನ ಇವರೆಲ್ಲರನ್ನೂ ಜಾತಿ ಸಂಕೋಲೆಯಿಂದ ಬಿಡುಗಡೆಗೊಳಿಸಿ ಶಿಕ್ಷಣ ಒದಗಿಸಿತು ಎಂದರು. ನಾನು ವೀರಮಕ್ಕಳ ಕುಣಿತಕ್ಕೆ ಸೇರಿ ಶಿಕ್ಷಣದಿಂದ ವಂಚಿತನಾಗಿದ್ದೆ. ಆದರೆ ನಮ್ಮ ಸಂವಿಧಾನ ಮತ್ತು ಒಬ್ಬ ಗುರುಗಳ ಕಾರಣದಿಂದ ನಾನು ನೇರವಾಗಿ ಐದನೇ ತರಗತಿಯಿಂದ ಶಿಕ್ಷಣ ಪಡೆದೆ. ಪರಿಣಾಮ ನಾನು ಎರಡೆರಡು ಬಾರಿ ಮುಖ್ಯಮಂತ್ರಿ ಆದೆ ಎಂದರು.ಬಸವಣ್ಣನವರು 850 ವರ್ಷಗಳ ಹಿಂದೆ ಇವನಾರವ ಎನ್ನಬೇಡಿ, ಇವ ನಮ್ಮವ ಎನ್ನಿ ಎಂದು ಜಾತಿ ವ್ಯವಸ್ಥೆಯನ್ನು ಧಿಕ್ಕರಿಸಿದ್ದರು. ಆದರೆ, ಇವತ್ತಿಗೂ ಜಾತಿ ಹೋಗಿಲ್ಲ ಎಂದರು.
ಕ್ರೈಸ್ತ ಧರ್ಮ ಗುರುಗಳು, ಕ್ರೈಸ್ತ ಸಂಸ್ಥೆಗಳು ಎಲ್ಲಾ ಧರ್ಮದ, ಎಲ್ಲಾ ಜಾತಿಯ ಬಡವರಿಗೂ ಶಿಕ್ಷಣ ಕೊಡುತ್ತಿದ್ದಾರೆ. ಇದು ಸಮಾಜಕ್ಕೆ ಬಹಳ ದೊಡ್ಡ ಕೊಡುಗೆ. ವೈಚಾರಿಕ ಮತ್ತು ವೈಜ್ಞಾನಿಕ ಶಿಕ್ಷಣ ಸಿಕ್ಕಾಗ ಮಾತ್ರ ಶಿಕ್ಷಣದ ಉದ್ದೇಶ ಈಡೇರುತ್ತದೆ ಎಂದರು. ದೇವ ಒಂದೇ ನಾಮ ಹಲವು ಎನ್ನುವುದು ಎಲ್ಲರ ನಂಬಿಕೆ. ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಲಶ ಎಂದು ಬಸವಾದಿ ಶರಣರು ಹೇಳಿದ್ದು ಈ ಕಾರಣಕ್ಕಾಗಿಯೇ ಎನ್ನುತ್ತಾ, ದೇವರಿಲ್ಲದ ಜಾಗವೇ ಇಲ್ಲ ಎನ್ನುವ ಸಂದೇಶವನ್ನು ಸಾರಿದ ಕನಕದಾಸರ ಬಾಳೆಹಣ್ಣಿನ ಕತೆಯನ್ನು ವಿವರಿಸಿದರು. ಅಂಬೇಡ್ಕರ್ ಅವರು ಸಂವಿಧಾನ ಅಂಗೀಕಾರ ಸಭೆಯಲ್ಲಿ ಮಾಡಿದ ಭಾಷಣವನ್ನು ಪ್ರತಿಯೊಬ್ಬರೂ ಓದಿಕೊಳ್ಳಬೇಕು. ಸಂವಿಧಾನದ ಹಕ್ಕು ಮತ್ತು ಕರ್ತವ್ಯಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಕರೆ ನೀಡಿದರು.
SUMMARY| Those who divide human beings in the name of caste and religion are traitors,
KEYWORDS| siddaramaiah, religion, kannadanews,