ಶಿವಮೊಗ್ಗ ಜೈಲಲ್ಲಿ ನಡೆದಿತ್ತು ಸಿನಿಮಾ ಸ್ಟೈಲ್‌ ಎಸ್ಕೇಪ್‌ | 8 ಕೈದಿಗಳ ಮಿಂಚಿನ ಓಟಕ್ಕೆ 2 ಗಂಟೆಯಲ್ಲಿ ಬ್ರೇಕ್‌ ಹಾಕಿದ್ದ ಪೊಲೀಸ್JP Flash back

Shivamogga old stories jp flashback | ಶಿವಮೊಗ್ಗದ ಹಳೆ ಜೈಲಿನಲ್ಲಿ 2000 ಇಸವಿ ಆಗಸ್ಟ್‌ ತಿಂಗಳಿನಲ್ಲಿ ನಡೆದಿದ್ದ ಘಟನೆಯ ವರದಿ ಜೆಪಿ ಬರೆಯುತ್ತಾರೆ

ಶಿವಮೊಗ್ಗ ಜೈಲಲ್ಲಿ ನಡೆದಿತ್ತು ಸಿನಿಮಾ ಸ್ಟೈಲ್‌ ಎಸ್ಕೇಪ್‌ | 8 ಕೈದಿಗಳ ಮಿಂಚಿನ ಓಟಕ್ಕೆ 2 ಗಂಟೆಯಲ್ಲಿ ಬ್ರೇಕ್‌ ಹಾಕಿದ್ದ ಪೊಲೀಸ್JP Flash back
ಶಿವಮೊಗ್ಗದ ಹಳೆಯ ಜೈಲ್

SHIVAMOGGA | MALENADUTODAY NEWS | Aug 19, 2024  



ಮಲೆನಾಡು ಟುಡೆ   | ಶಿವಮೊಗ್ಗದಿಂದ ಪ್ರಸಾರವಾಗುವ ಮಲೆನಾಡಿನ ವಿಶೇಷ ಡಿಜಿಟಲ್‌, ನ್ಯೂಸ್‌, ಮೀಡಿಯಾ 



ನಾವು ನೋಡುವ ಶಿವಮೊಗ್ಗ ಇವತ್ತಿನದ್ದು, ನಾಳೆಯದ್ದನ್ನು ಇನ್ನಷ್ಟೆ ಎದುರುಗೊಳ್ಳಬೇಕು. ಆದರೆ ನಾವು ಅರಿಯದಂತಹ ಅದೆಷ್ಟೋ ಘಟನೆಗಳು ಶಿವಮೊಗ್ಗ ಎನ್ನುವ ಜಿಲ್ಲಾ ಆವರಣದೊಳಗೆ ಕ್ಯಾಲೆಂಡರ್‌ನ ಹಿಂದಿನ ದಿನಾಂಕಗಳಲ್ಲಿ ನಡೆದು ಹೋಗಿವೆ. ಆ ಪೈಕಿ ಕೆಲವು ಘಟನೆಗಳು ಆಯಾ ಕಾಲಕ್ಕೆ ರಾಜ್ಯದ ಗಮನವನ್ನ ತನ್ನತ್ತ ಸೆಳೆದಿದ್ದಷ್ಟೆ ಅಲ್ಲದೆ ಶಿವಮೊಗ್ಗದ ಗುರುತನ್ನು ದಾಖಲಿಸಿದೆ. 

ರಾಜಕೀಯವೇ ಆಗಲಿ, ಸಾಮಾಜಿಕ ಹೋರಾಟಗಳಲೇ ಆಗಲಿ, ಸಮಾನತೆಗಾಗಿ ನಡೆದ ಬಂಡಾಯವೇ ಆಗಲಿ, ಪತ್ರಿಕಾ ಹೋರಾಟವೇ ಆಗಲಿ, ಪಾತಕ ಲೋಕವೇ ಆಗಲಿ, ಪೊಲೀಸ್‌ ಇಲಾಖೆಯ ತನಿಖಾ ಪೈಲ್‌ಗಳೇ ಆಗಲಿ ಕೃಷಿಯಿಂದ ಕ್ರೈಂನವರೆಗೂ ಶಿವಮೊಗ್ಗದ ಇತಿಹಾಸದ ಗುರುತು ವಿಭಿನ್ನವಾದುದು. ಅಂತಹ ಇತಿಹಾಸದ ಘಟನೆಗಳನ್ನ ಮತ್ತೊಮ್ಮೆ ಮಲೆನಾಡಿಗರಿಗೆ ನೆನಪಿಸುವ ವಿಭಾಗವೇ ಜೆಪಿ ಪ್ಲಾಶ್‌ ಬ್ಯಾಕ್‌.. 

ಜೆಪಿ ಪ್ಲಾಶ್‌ ಬ್ಯಾಕ್‌.. 

ಶಿವಮೊಗ್ಗದಲ್ಲಿ ನಡೆದ ಘಟನೆಗಳಿಗೆ ಸಾಕ್ಷಿ ಹೇಳುವುದು ಶಿವಮೊಗ್ಗದ ಪತ್ರಿಕಾ ಲೋಕ. ಜಿಲ್ಲೆಯ ಹೋರಾಟದ ಹೆಜ್ಜೆಗಳಿಂದ ಹಿಡಿದು ಕಾಡು ದಾರಿಯಲ್ಲಿ ತಪ್ಪಿದ ನಡೆಗಳವರೆಗೂ ಪ್ರತಿಯೊಂದನ್ನ ನಮೂದಿಸಿದ ಶಿವಮೊಗ್ಗದ ಪತ್ರಿಕಾಲೋಕದಲ್ಲಿ ನಮೂದಾದ ಘಟನೆಯೊಂದನ್ನ ಇವತ್ತು ನಿಮ್ಮ ಮುಂದೆ ಇಡುತ್ತಿದ್ದೇವೆ.

ಕ್ರಾಂತಿದೀಪ 

ಇತ್ತೀಚೆಗೆಷ್ಟೆ ಶಿವಮೊಗ್ಗದ ಹೆಮ್ಮೆಯ ಕ್ರಾಂತಿದೀಪ ಪತ್ರಿಕೆ ನಲವತ್ತು ವರ್ಷಗಳನ್ನ ಪೂರೈಸಿತು. ಮಾಧ್ಯಮದ ಜಗತ್ತಿನ ಹಾದಿಯಲ್ಲಿ ನಾಲ್ಕು ದಶಕ ಪೂರೈಸುವುದು ಸುಲಭ ಸಾಧ್ಯದ ಮಾತಲ್ಲ. ಆ ನಿಟ್ಟಿನಲ್ಲಿ ಯಶಸ್ಸು ಸಾಧಿಸಿದ ಪತ್ರಿಕೆಗೆ ಮಲೆನಾಡು ಟುಡೆ ಶುಭ ಹಾರೈಸಿ , ಪತ್ರಿಕೆ ದಾಖಲಿಸಿದ ಇತಿಹಾಸದ ಪುಟಗಳನ್ನ ಕೆದಕಿದಾಗ ಕಂಡಿದ್ದು ಶಿವಮೊಗ್ಗ ಜೈಲಿನ ಗ್ರೇಟ್‌ ಎಸ್ಕೇಪ್‌ ಸ್ಟೋರಿ.. 

ಶಿವಮೊಗ್ಗ ಜೈಲ್‌ನಿಂದ ಮಹಾ ಪಲಾಯನ

ಕೆ ಪಿ ಪೂರ್ಣಚಂದ್ರ ತೇಜಸ್ವಿಯವರ ಮಹಾಪಲಾಯನ ಓದಿದವರಿಗೆ ಜೈಲಿನ ಬಂಧನದಿಂದ ಕೈದಿಗಳು ತಪ್ಪಿಸಿಕೊಳ್ಳುವ ಅನುಭವದ ಕಥನ ಸಿಗುತ್ತದೆ. ಅಂತಹುದ್ದೆ ಒಂದು ಘಟನೆ ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಹಿಂದೊಮ್ಮೆ ನಡೆದಿತ್ತು. ಸದ್ಯ ಶಿವಮೊಗ್ಗದ ಸೋಗಾನೆಯಲ್ಲಿ ಕೇಂದ್ರ ಕಾರಾಗೃಹವಿದೆ. ಅಲ್ಲಿಗೆ ಜೈಲ್‌ ಶಿಫ್ಟ್‌ ಆಗುವುದಕ್ಕು ಮೊದಲು ಲಕ್ಷ್ಮೀ ಟಾಕೀಸ್‌ ಸಮೀಪ ಶಿವಮೊಗ್ಗ ಕೇಂದ್ರ ಕಾರಾಗೃಹವಿತ್ತು. ವಿಶಾಲವಾಗಿದ್ದ ಆಗಿದ್ದ ಆ ಜೈಲಿನಿಂದ ತಪ್ಪಿಸಿಕೊಂಡು ಬರುವುದು ಅಂದರೆ ಅಸಾಧ್ಯವೇ ಆಗಿತ್ತು.  ಆದಾಗ್ಯು ಅಂತಹ ಕಾರಾಗೃಹದ ಮೇನ್‌ ಡೋರ್‌ನಿಂದಲೇ ಕೈದಿಗಳು ತಪ್ಪಿಸಿಕೊಂಡಿದ್ದರು. ವಿಶೇಷ ಅಂದರೆ ಅವರು ತಪ್ಪಿಸಿಕೊಂಡಷ್ಟೆ ವೇಗದಲ್ಲಿ ಪೊಲೀಸರು ಎಸ್ಕೇಪ್‌ ಆದವರನ್ನ ಹಿಡಿದು ಇದು ಶಿವಮೊಗ್ಗ ಪೊಲೀಸ್‌ ಎಂದು ಸಾಧಿಸಿ ತೋರಿಸಿದ್ದರು. 

ಅಕ್ಟೋಬರ್‌ 30 2000

ಪೊಲೀಸರ ಕ್ಷಿಪ್ರ ಕಾರಾಚರಣೆ: ತಪ್ಪಿಸಿಕೊಂಡ ಪಾತಕಿಗಳ ಮರುಬಂಧನ

ಶಿವಮೊಗ್ಗ ಜೈಲಿನಿಂದ ಕೊಲೆ, ರಾಬರಿ, ಕಳ್ಳತನ ಕೇಸು ಕುಖ್ಯಾತರಾಗಿದ್ದ 8 ಮಂದಿ ತಪ್ಪಿಸಿಕೊಂಡಿದ್ದರು. ಅವರು ತಪ್ಪಿಸಿಕೊಂಡ ರೀತಿ ಭೀಕರವಾಗಿತ್ತು. ತಮ್ಮ ಕೇಸ್‌ ನಲ್ಲಿ ಜಾಮೀನು ಪಡೆದಿದ್ದ ಇಬ್ಬರು ಕೈದಿಗಳು ತಮ್ಮ ಸಹಚರನ್ನ ತಮ್ಮ ಜೊತೆಗೆ ಕರೆದೊಯ್ಯಲು ಜೈಲಿನಲ್ಲಿಯೇ ಎಸ್ಕೇಪ್‌ ಪ್ಲಾನ್‌ವೊಂದನ್ನ ತಯಾರಿಸಿದ್ದರು. 

ಬೆಳಗ್ಗೆ ಬೆಳಗ್ಗೆ 

ಬೆಳಿಗ್ಗೆ 6.30ಕ್ಕೆ ಕೈದಿಗಳಿಗೆ ತಿಂಡಿ ಕೊಡುವ ಸಂದರ್ಭದಲ್ಲಿ ಜೈಲಿಂದ ತಪ್ಪಿಸಿಕೊಳ್ಳುವ ತೀರ್ಮಾನದಲ್ಲಿದ್ದ 8 ಮಂದಿ ಮೊದಲು ಮೇನ್‌ ಗೇಟ್‌ನಲ್ಲಿದ್ದ ಸಿಬ್ಬಂದಿಯನ್ನ ದಫೆದಾರ್‌ ಕರೆಯುತ್ತಿದ್ದಾರೆ ಎಂದು ಹೇಳಿ ಕರೆಸಿಕೊಂಡಿದ್ದಾರೆ. ಸಿಬ್ಬಂದಿ ಏನು ಅಂತಾ ನೋಡಲು ಜೈಲು ಒಳಬದಿಯ ಬಾಗಿಲು ಓಪನ್‌ ಮಾಡುತ್ತಲೇ ಮೇನ್‌ ಗೇಟ್‌ ಆವರಣಕ್ಕೆ ನುಗ್ಗಿದ ಕೈದಿಗಳು  ಮುಖ್ಯಧ್ವಾರದಲ್ಲಿದ್ದ ವಾರ್ಡರ್‌ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದರು. 

ವಾರ್ಡರ್‌ ಮೇಲೆ ಹಲ್ಲೆ ಮೇನ್‌ ಡೋರ್‌ನಲ್ಲಿಯೇ ಎಸ್ಕೇಪ್

ಹೀಗೆ ಹಲ್ಲೆ ಮಾಡಿ ವಾರ್ಡ್‌ರ್‌ ಬಳಿ ಇದ್ದ ಬೀಗದ ಕೈ ಮೂಲಕ ಮೇನ್‌ ಗೇಟ್‌ ಓಪನ್‌ ಮಾಡಿ ಅಲ್ಲಿಂದಲೇ ಎಸ್ಕೇಪ್‌ ಆಗಿದ್ದರು. ಆರೋಪಿಗಳು ಎಸ್ಕೇಪ್‌ ಆಗುತ್ತಿದ್ದಂತೆ ಗಂಭೀರ ಸ್ಥಿತಿಯಲ್ಲಿದ್ದ ವಾರ್ಡರ್‌ ಎಚ್ಚೆತ್ತು ಸೈರನ್‌ ಆನ್‌ ಮಾಡಿದ್ದಾರೆ. ಸ್ಥಳಕ್ಕೆ ಬಂದ ಸಿಬ್ಬಂದಿ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಇತ್ತ ವಿಷಯ ತಿಳಿಯುತ್ತಲೇ ಶಿವಮೊಗ್ಗ ಪೊಲೀಸ್‌ ಎಲ್ಲೆಡೆ ನಾಕಾಬಂದಿ ಹಾಕಿ, ಆರೋಪಿಗಳ ಮರುಬಂಧನಕ್ಕೆ ಸ್ಕೆಚ್‌ ರೂಪಿಸಿತ್ತು. 

ಜಸ್ಟ್‌ 2 ಗಂಟೆ ಕಾರ್ಯಾಚರಣೆ 

ಅಂದಿನ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಈಶ್ವರಚಂದ್ರ ವಿದ್ಯಾಸಾಗರ್‌ ಹಾಗೂ ಎಎಸ್‌ಪಿ ಪುನೀತ್‌ ಅರೋರ ನೇತೃತ್ವದ ಟೀಂ ಎಸ್ಕೇಪ್‌ ಆದವರ ಬೆನ್ನಟ್ಟಿತ್ತು.  ಜೈಲಿನಿಂದ ಮೇನ್‌ ಗೇಟ್‌ನಲ್ಲಿ ಹೊರಟವರು ಹೇಗೆ ಹೋಗಬಹುದು. ಯಾವ ಕಡೆಯಿಂದ ಸಾಗಬಹುದು ಎಂಬೆಲ್ಲಾ ಯೋಚನೆಗಳ ಮೇಲೆ ಆಕ್ಷನ್‌ ಪ್ಲಾನ್‌ ರೂಪಿಸಿದ್ದ ಪೊಲೀಸರಿಗೆ ಕೆಲವೊಂದು ಸುಳಿವುಗಳು ಸಿಕ್ಕಿದ್ದವು. ಆರೋಪಿಗಳು ರಾಜೇಂದ್ರ ನಗರ, ಕೀರ್ತಿ ನಗರ ದಾಟಿ ಗಾರೆ ಚಾನಲ್‌ ಹಾರಿಕೊಂಡು ಮುಂದಕ್ಕೆ ಸಾಗಿಸಿದ್ದರು. ಅಲ್ಲಿನ ತೋಟವೊಂದಕ್ಕೆ ನುಗ್ಗಿದ್ದ ಆರೋಪಿಗಳು ತೋಟದ ಮಾಲಿಗೆ ಹೊಡೆದು ಮುಂದಕ್ಕೆ ಹೋಗಿದ್ದರು. ಅಷ್ಟೊತ್ತಿಗೆ ಜೈಲಿನ ಸಿಬ್ಬಂದಿ ಹಾಗೂ ಪೊಲೀಸ್‌ ಸಿಬ್ಬಂದಿ ಆರೋಪಿಗಳ ಬೆನ್ನಿಗೆ ಅಟ್ಟಿಸಿಕೊಂಡು ಬಂದು ಬಿಟ್ಟಿದ್ದರು. 

ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್‌ ಒಂದು ಫಾಲೋ ಕೊಡಿ

ನವುಲೆಯಲ್ಲಿ ಸಿಕ್ಕಿಬಿದ್ದ ಆರೋಪಿಗಳು

ಇನ್ನೂ ಪೊಲೀಸ್‌ ಹಾಗೂ ಜೈಲು ಸಿಬ್ಬಂದಿಗಳ ಕಾರ್ಯಾಚರಣೆಗೆ ನವುಲೆ ಸುತ್ತಮುತ್ತಲಿನ ಮಂದಿ ಸಹಕಾರ ನೀಡಿದದರು. ಹೀಗಾಗಿ ಆರೋಪಿಗಳಿಗೆ ಮತ್ತೆಲ್ಲೂ ಓಡಲು ಅವಕಾಶ ಸಿಗಲಿಲ್ಲ. ಹೀಗಾಗಿ ಬಟ್ಟೆ ಕಳಚಿದ ಆರೋಪಿಗಳು ದೊಡ್ಡ ಮರ ಹತ್ತಿ ಅಡಗಿ ಕುಳತಿದ್ದರು. ಅವರನ್ನ ಪೊಲೀಸರು ಫೈರ್‌ ಮಾಡುವ ಎಚ್ಚರಿಕೆ ಕೊಟ್ಟು ಅಂತಿಮವಾಗಿ ಅರೆಸ್ಟ್‌ ಮಾಡಿದ್ದರು. ‌

ಬೆಂಗಳೂರು ನಂಟು

ಹೀಗೆ ಅಂತಿಮವಾಗಿ ಆರೋಪಿಗಳು ಮತ್ತೆ ಕಾನೂನಿಗೆ ತೆಕ್ಕೆಯಲ್ಲಿ ಸಿಕ್ಕಿಬಿದ್ದಿದ್ದರು. ವಿಶೇಷ ಅಂದರೆ, ಈ ಆರೋಪಿಗಳ ಪೈಕಿ ಬೆಂಗಳೂರಲ್ಲಿ ಕುಖ್ಯಾತ ರೌಡಿಯೊಬ್ಬನನ್ನ ಕೊಲೆಗೈಯ್ದ ಆರೋಪಿಯೊಬ್ಬನಿದ್ದ. ಅಂದಿನ ಘಟನೆಗೂ ಮೊದಲೇ ಒಂದು ಸಲ ಎಸ್ಕೇಪ್‌ ಆಗಿದ್ದ ಆರೋಪಿ ಶಿವಮೊಗ್ಗ ಜೈಲು ಸೇರಿದ ಮೇಲೆ ತನ್ನದೇ ಒಂದು ತಂಡವನ್ನ ಕಟ್ಟಿಕೊಂಡಿದ್ದ. ಆ ಸಂದರ್ಭದಲ್ಲಿ ಈ ಘಟನೆಯನ್ನು ವಿಸ್ತೃತವಾಗಿ ವರದಿ ಮಾಡಿದ್ದ ಕ್ರಾಂತಿದೀಪ ಪತ್ರಿಕೆ, ಆ ಸಮಯದಲ್ಲಿದ್ದ ವ್ಯವಸ್ಥೆಯ ಅವ್ಯವಸ್ಥೆಯನ್ನು ಸಹ ನೇರವಾಗಿ ಬೊಟ್ಟು ಮಾಡಿತ್ತು. 

ಓದುಗರೆ, ಕ್ರಾಂತಿದೀಪ ಪತ್ರಿಕೆಯ ಸಂಪಾದಕರು ಎನ್‌ ಮಂಜುನಾಥ್‌ರವರ ಸಮ್ಮತಿಯೊಂದಿಗೆ ಈ ಪ್ಲಾಶ್‌ ಬ್ಯಾಕ್‌ ವರದಿಯನ್ನ ನಿಮ್ಮ ಮುಂದೆ ಇಡುತ್ತಿದ್ದೇವೆ. ವೈಯಕ್ತಿಕ ವಿವರಗಳನ್ನ ಮರೆಮಾಚಲಾಗಿದ್ದು, ಇತಿಹಾಸದಲ್ಲಿ ಶಿವಮೊಗ್ಗದಲ್ಲಿ ನಡೆದ ಘಟನೆಯನ್ನು ನಿಮ್ಮ ಮುಂದಿಡುವ ಏಕೈಕ ಉದ್ದೇಶದಿಂದ ಈ ವರದಿಯನ್ನ ಮಾಡಲಾಗಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನ ಕಾಮೆಂಟ್ಸ್‌ನಲ್ಲಿ ತಿಳಿಸಿ

ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್‌ ಒಂದು ಫಾಲೋ ಕೊಡಿ

ಇನ್ನಷ್ಟು ಸುದ್ದಿಗಳು