ಖಾತೆ ಕೇಳ್ಬೇಡಿ, ಇ ಖಾತೆ ಆಗಿಯೇ ಇಲ್ಲ ಬಿಡಿ | ಜನರಿಗೆ ಸಂಕಷ್ಟ, ಪಾಲಿಕೆಗೆ ದಸರಾ? | ಸಚಿವರೇ ಇತ್ತ ನೋಡಿ

Shivamogga City Corporation , e-Property Problem   

ಖಾತೆ ಕೇಳ್ಬೇಡಿ, ಇ ಖಾತೆ  ಆಗಿಯೇ ಇಲ್ಲ  ಬಿಡಿ | ಜನರಿಗೆ ಸಂಕಷ್ಟ, ಪಾಲಿಕೆಗೆ ದಸರಾ? | ಸಚಿವರೇ ಇತ್ತ ನೋಡಿ
Shivamogga City Corporation , e-Property Problem   

 SHIVAMOGGA | MALENADUTODAY NEWS | ಮಲೆನಾಡು ಟುಡೆ 

Oct 10, 2024 |  ಶಿವಮೊಗ್ಗ ಮಹಾನಗರ ಪಾಲಿಕೆ ದಸರಾ ಹಬ್ಬದಲ್ಲಿ ಬ್ಯುಸಿಯಾಗಿದೆ.ಇನ್ನೊಂದೆಡೆ ಜನರಿಗೆ ತಾಪತ್ರಯ ತಂದಿಟ್ಟಿದೆ. ಹೌದು ದಿನಬೆಳಗಾದರೆ, ಶಿವಮೊಗ್ಗ ಮಹಾನಗರ ಪಾಲಿಕೆಯ ಟಪಾಲ್‌ ವಿಭಾಗದ ಬಳಿಯಲ್ಲಿ ನೂರು ರೂಪಾಯಿ ಕಟ್ಟಿ ಖಾತೆ ಪಡೆಯುವ ದೊಡ್ಡ ಸರತಿ ಸಾಲು ಇರುತ್ತಿತ್ತು. ಆದರೆ ಕೆಲದಿನಗಳಿಂದ ಬಂದ ಜನರಿಗೆ ಖಾತೆ ಎಸ್ಟೇಟ್‌ ಸಿಗುತ್ತಿಲ್ಲ. ಇದಕ್ಕೆ ಕಾರಣ ಇ -ಸ್ವತ್ತು .. 

ಇಸ್ವತ್ತು ಕಡ್ಡಾಯ!

ಹೌದು, ಕಳೆದ ಅಕ್ಟೋಬರ್‌ 7 ರಿಂದಲೇ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾವೇರಿ-2 ತಂತ್ರಾಂಶದೊಂದಿಗೆ ಇ-ಆಸ್ತಿ ತಂತ್ರಾಂಶವನ್ನು ಸಂಯೋಜಿಸಲಾಗಿದ್ದು ಸರ್ಕಾರದ ಸುತ್ತೋಲೆಯ ಸೂಚನೆ ಮೇರೆಗೆ ಶಿವಮೊಗ್ಗ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಸ್ಥಿರಾಸ್ತಿಗಳ ನೋಂದಣಿಗೆ ಇ-ಆಸ್ತಿ ತಂತ್ರಾಂಶದಲ್ಲಿ ಮಾತ್ರ ಸ್ವತ್ತಿನ ನಮೂನೆ 2/3ನ್ನು ನೀಡಲು ಹಾಗೂ ಹಕ್ಕು ವರ್ಗಾವಣೆಗೆ ಕ್ರಮವಹಿಸಲು ಮತ್ತು ಇ-ಆಸ್ತಿ ತಂತ್ರಾಂಶವನ್ನು ಹೊರತುಪಡಿಸಿ ಭೌತಿಕವಾಗಿ ಹಾಗೂ ಖಾಸಗಿ ತಂತ್ರಾಂಶವನ್ನು ಬಳಕೆ ಮಾಡಿ ನಮೂನೆ 2/3ನ್ನು ನೀಡಬಾರದಾಗಿ ಆದೇಶ ಮಾಡಲಾಗಿದೆ. 

ಇಲ್ಲೊಂದು ಸಮಸ್ಯೆ ಇದೆ

ಆದರೆ ಸಮಸ್ಯೆ ಇರೋದೆ ಇಲ್ಲಿ. ಶಿವಮೊಗ್ಗ ಮಹಾನಗರ ಪಾಲಿಕೆ ವ್ಯವಸ್ಥೆ ಇಂತಹದ್ದೊಂದು ಆದೇಶಕ್ಕೆ ಸಿದ್ಧವಾಗಿಯೇ ಇಲ್ಲ. ಹೀಗಾಗಿ ಜನ ಸರ್‌ ನಮಗೆ ಖಾತೆ ಕೊಡ್ತಿಲ್ಲ ಎನಾದರೂ ಮಾಡಿ ಸರ್‌ ಎಂದು ಉಸ್ತುವಾರಿ ಸಚಿವರು, ಶಾಸಕರು, ಸಂಸದರ ಕಚೇರಿಗೆ ಅಲೆದಾಡುವಂತಾಗಿದೆ. 

ಇಷ್ಟಕ್ಕೂ ಏನಿದು ಸಮಸ್ಯೆ?

2018 ರಲ್ಲಿ ಸರ್ಕಾರ ಇಸ್ವತ್ತು ತಂತ್ರಾಶದಲ್ಲಿ ಆಸ್ತಿ ದಾಖಲೆಗಳನ್ನು ನಮೂದಿಸಲು ಪ್ರಾರಂಭಿಸಿತ್ತು. ಆದರೆ ಶಿವಮೊಗ್ಗ ಮಹಾನಗರ ಪಾಲಿಕೆ ಈ ವಿಚಾರದಲ್ಲಿ ಎಚ್ಚರವಾಗಿದ್ದು  2023 ರಲ್ಲಿ. ವರ್ಷದ ಕಳೆಗೆ ಶಿವಮೊಗ್ಗ ಮಹಾನಗರ ಪಾಲಿಕೆ, ತನ್ನ ವ್ಯಾಪ್ತಿ ತುಂಬಾ ಇಸ್ವತ್ತು ಮಾಡಿಸಿಕೊಳ್ಳಿ ಅದಕ್ಕಾಗಿ ಆಸ್ತಿಪತ್ರ, ಲೈಟ್‌ ಬಿಲ್‌, ಆಧಾರ್‌ ಕಾರ್ಡ್‌ ನಕಲುಗಳನ್ನ ಒಳಗೊಂಡ ದಾಖಲೆಗಳನ್ನ ಆಯಾ ವಾರ್ಡ್‌ನ ಅಧಿಕಾರಿಗಳಿಗೆ ನೀಡುವಂತೆ ಆಟೋಗಳಲ್ಲಿ ಟಾಂ ಟಾಂ ಹೊಡೆದಿತ್ತು. ಕರಪತ್ರಗಳನ್ನ ಸಹ ನೀಡಿತ್ತು. ಆದರೆ ಆನಂತರ ಪಾಲಿಕೆ ಅದ್ಯಾವ ಪರಿ ನಿದ್ರೆಗೆ ಜಾರಿತು ಎಂದರೆ, ಇನ್ನೂ ಲಕ್ಷಾಂತರ ಆಸ್ತಿಗಳ ಇಸ್ವತ್ತು ಬಾಕಿ ಇದೆ. ಇದುವರೆಗೂ ಜನಸಾಮಾನ್ಯರು ಸಲ್ಲಿಸಿರುವ ದಾಖಲೆಯ ಬಗ್ಗೆ ವಿಚಾರಿಸಿದರೆ ನೀವು ಕೊಟ್ಟಂತಹ ದಾಖಲೆಯೂ ಸಾಫ್ಟ್ವೇರ್ ವ್ಯತ್ಯಾಸದಿಂದ ದಾಖಲೆ ಆಗಿರುವುದಿಲ್ಲ ಪುನಹ ನೀವು ದಾಖಲಾತಿಗಳನ್ನು ಸಲ್ಲಿಸಿ ಎಂದು ತಮ್ಮದೇ ಅವ್ಯವಸ್ಥೆಯನ್ನು ಬಚ್ಚಿಡುವ ಕಥೆಗಳನ್ನ  ಹೇಳುತ್ತಿದ್ದಾರೆ ಅಧಿಕಾರಿಗಳು 

ವರ್ಷದ ಕಥೆ ವ್ಯಥೆ

ಇನ್ನೊಂದೆಡೆ ಇಸ್ವತ್ತಿಗಾಗಿ ನಕಲುಗಳನ್ನ ಕೊಟ್ಟವರಿಗೆ ಪಾಲಿಕೆ ಅಧಿಕಾರಿಗಳು ಸ್ವೀಕೃತಿಯನ್ನ ಸಹ ನೀಡಿಲ್ಲ. ಇದರಿಂದಾಗಿ ಹಲವರದ್ದು ಇಸ್ವತ್ತು ಆಯಿತೆ ಇಲ್ಲವೆ? ಕೊಟ್ಟ ದಾಖಲೆಗಳು ಏನಾದವು ಎಂಬುದು ತಿಳಿಯುತ್ತಿಲ್ಲ ಎಂದು ಇಸ್ವತ್ತಿಗಾಗಿ ಅಧಿಕಾರಿಯ ಬಳಿ ದಾಖಲೆ ಕೊಟ್ಟ ಒಬ್ಬ ಹಿರಿಯರು ಹೇಳುತ್ತಾರೆ. ಇನ್ನೂ ಇಸ್ವತ್ತು ಆದ ಮೇಲೆ ಮೊಬೈಲ್‌ಗೆ ಮೆಸೇಜ್‌ ಬರುತ್ತೆ, ಇ ಖಾತೆ ಬರುತ್ತೆ ಹಾಗೆ ಹೀಗೆ ಎನ್ನುವ ಸಲಹೆ ನೀಡಿದ್ದ ಪಾಲಿಕೆಯ ಅಧಿಕಾರಿಗಳು ಆಮೇಲೆ ಅದರ ಬಗ್ಗೆ ತಲೆಯೇ ಕೆಡಿಸಿಕೊಂಡಿಲ್ಲ. ಬಹುತೇಕ ಈ ಪ್ರಕ್ರಿಯೆ ಒಂದು ಹಂತಕ್ಕೆ ನಿಂತೆ ಹೋಗಿತ್ತು ಎನ್ನುವ ಅನುಮಾನ ಪಾಲಿಕೆಯಲ್ಲಿದೆ. ಇದೀಗ ದಿಢೀರ್‌ ಅಂಥಾ ಇಸ್ವತ್ತು ಕಡ್ಡಾಯಗೊಳಿಸಿ, ಅಧಿಕಾರಿಗಳು ಸುಮ್ಮನಾಗಿದ್ದಾರೆ. ಎಲ್ಲಾ ತ್ವರಿತವಾಗಿ ಇ ಸ್ವತ್ತು ಮಾಡುತ್ತೇವೆ ಎನ್ನುವ ಅಧಿಕಾರಿಗಳು ಅಗತ್ಯವಿರುವ ಪ್ರಕ್ರಿಯೆಗಳ ಬಗ್ಗೆಯು ಮಾಹಿತಿ ನೀಡುತ್ತಿಲ್ಲ. ಜೊತೆಯಲ್ಲಿ ಈ ಕೆಲಸಕ್ಕೆ ವೇಗವನ್ನು ನೀಡುತ್ತಿಲ್ಲ.

ಪಾಲಿಕೆಯಿಂದ ಕಷ್ಟ ನಷ್ಟ

ಇನ್ಮೇಲೆ ಪಿಸಿಕಲ್‌ ಖಾತೆ ಕೊಡೊದಿಲ್ಲ ಎಂದು ಪಾಲಿಕೆ ಬರೆದಿರುವ ಷರಾ , ಜನಸಾಮಾನ್ಯನಿಗೆ ನಾನಾ ಕಷ್ಟ ನಷ್ಟ ಉಂಟುಮಾಡುತ್ತಿದೆ. ಪ್ರತಿನಿತ್ಯ ಪಾಲಿಕೆಗೆ ಖಾತೆ ಎಸ್ಟೇಟ್‌ಗಾಗಿ ಬರುವ ನೂರಾರು ಮಂದಿಯ ತಮ್ಮದೆ ಆದ  ಸಮಸ್ಯೆ ಎದುರಿಸುತ್ತಿದ್ದಾರ.ೆ 

ಪಿಸಿಕಲ್‌ ಖಾತೆ ಸಿಗುವುದಿಲ್ಲ. ಇಸ್ವತ್ತು ಆಗಿಲ್ಲ. ಈಗ ದಿಢೀರ್‌ ಅಂತಾ ಇಸ್ವತ್ತು ಮಾಡಿಸಲು ಸಹ ಆಗುತ್ತಿಲ್ಲ. ಹೀಗಾಗಿ ಪಿಸಿಕಲ್‌ ಖಾತೆಯ ಅನಿವಾರ್ಯತೆಗೆ ಬಿದ್ದವರು ಪರಿಪಾಟಲು ಪಡುವಂತಾಗಿದೆ.  ದೈನಂದಿನ ವಹಿವಾಟಿನಲ್ಲಿ ಖಾತೆ ಎಷ್ಟು ಮುಖ್ಯವಾಗುತ್ತದೆ ಎಂದರೆ ಹಲವು ಕಚೇರಿ ಕೆಲಸಗಳಿಗೆ ಖಾತೆ ಅನಿವಾರ್ಯ. 

ಕೋರ್ಟ್‌ನಲ್ಲಿ ಯಾರಿಗೋ ಜಾಮೀನು ಕೊಡಲು ಖಾತೆ ಅವ‍ಶ್ಯವಾಗಿರುತ್ತದೆ. ಬ್ಯಾಂಕ್‌ನಲ್ಲಿ ಸಾಲಕ್ಕೂ ಖಾತೆ ಬೇಕು, ರಿಜಿಸ್ಟೇಷನ್‌ಗೂ ಖಾತೆ, ಗೃಹಪ್ರವೇಶ, ಮದುವೆಯಂತ ಯಾವುದೋ ವಿಶೇಷ ಸಂದರ್ಭಕ್ಕೆ ಹಣ ಹೊಂದಿಸಲು ಸಾಲ ಮಾಡಲು ಮುಂದಾದವರಿಗೆ ಈಗ ಪಿಸಿಕಲ್‌ ಖಾತೆ ಸಿಗುತ್ತಿಲ್ಲ.  ಕಟ್ಟಡ ನಿರ್ಮಾಣಕ್ಕೆ , ಸಿಮೆಂಟ್ ಕಬ್ಬಿಣ ಬಣ್ಣ ಟ್ರಾನ್ಸ್‌ಪೋರ್ಟ್‌ ಸೇರಿದಂತೆ ಹಲವು ವಿಚಾರಗಳಿಗೆ ಖಾತೆ ಬೇಕು. ಆದರೆ ಖಾತೆ ಸಿಗುತ್ತಿಲ್ಲ, ಇ ಖಾತೆ ಆಗಿಲ್ಲ. ಪರಿಣಾಮ ಶಿವಮೊಗ್ಗದ ಆರ್ಥಿಕ ವ್ಯವಸ್ಥೆಗೆ ಪಾಲಿಕೆಯಿಂದಲೇ ಪೆಟ್ಟು ಬೀಳುತ್ತಿದೆ.  

ಇನ್ನೂ ಏನೂ ಆಗಿಲ್ಲ?

35 ವಾರ್ಡ್‌ಗಳಲ್ಲಿ ಸುಮಾರು 62,000ಕ್ಕೂ ಹೆಚ್ಚು ಖಾತೆದಾರರಿದ್ದಾರೆ. ಈ ಪೈಕಿ ಇಸ್ವತ್ತಿಗೆ ತಮ್ಮ ಆಸ್ತಿ ವಿವರವನ್ನ ವರ್ಗಾಯಿಸಿದವರ ಸಂಖ್ಯೆ ಐನೂರುಕ್ಕಿಂತಲೂ ಕಮ್ಮಿಯಿದೆ. ಹಾಗಿದ್ದಾಗ ದಿಢೀರ್‌ ಪಿಸಿಕಲ್‌ ಖಾತೆ ನಿಲ್ಲಿಸಿದರೆ, ಜನರಿಗೆ ಕಷ್ಟಕೊಟ್ಟಂತಲ್ಲದೆ ಮತ್ತೆನಿಲ್ಲ. ಸರ್ಕಾರದ ಆದೇಶಕ್ಕೆ ಪ್ರತಿಯಾಗಿ ಪಾಲಿಕೆ ವಾಸ್ತವ ಸಂಗತಿಯನ್ನು ಮನವರಿಕೆ ಮಾಡುವ ಪ್ರಯತ್ನ ಮಾಡಬೇಕಿತ್ತು. ಜೊತೆಯಲ್ಲಿ ಇ ಸ್ವತ್ತು ದಾಖಲಿಸುವ ಪ್ರಕ್ರಿಯೆಯನ್ನ ಕ್ಷಿಪ್ರಗೊಳಿಸಿ, ಒಂದಷ್ಟು ಸಮಯವನ್ನ ಆಸ್ತಿದಾರರಿಗೆ ನೀಡಬೇಕಿತ್ತು. ಇದಕ್ಕೆ ಹೊರತಾಗಿ ಪಾಲಿಕೆ ದಸರಾದಲ್ಲಿ ಬ್ಯುಸಿಯಾಗಿದೆ. ಹಾಗಾದರೆ ಸಮಸ್ಯೆಗೆ ಪರಿಹಾರ ಏನು ಎನ್ನುವುದಕ್ಕೆ ಉತ್ತರ ಸಚಿವರು, ಶಾಸಕರು ಹೇಳಬೇಕಿದೆ.  

SUMMARY  | Details of Shivamogga City Corporation and e-Property Problem 



KEYWORDS  |   Shivamogga City Corporation , e-Property Problem