ನಕ್ಸಲ್ ಲತಾ ಮುಂಡಗಾರು ಟೀಂ ಶರಣಾಗಲು ಸಿದ್ದರಾಮಯ್ಯ ಸರ್ಕಾರ! ಹೇಗೆ ಗೊತ್ತಾ? JP ಬರೆಯುತ್ತಾರೆ
Naxals Lata Mundagaru, Sundari Kuthlur, Balehole Vanajakshi, Mareppa Aroli, K. Vasantha, T.N. Jeesh to surrender tomorrow
SHIVAMOGGA | MALENADUTODAY NEWS | ಮಲೆನಾಡು ಟುಡೆ Jan 7, 2025
ಅನಾದಿಯಿಂದಲೂ ಶಿವಮೊಗ್ಗ ಸಮಾಜದ ನಾನಾ ಮುಖಗಳಿಗೆ ತನ್ನೊಡಲನ್ನೆ ವೇದಿಕೆಯಾಗಿಸಿದೆ. ಈ ಜಿಲ್ಲೆ ನೀಡಿದ ಅಂತಹ ವೇದಿಕೆಗಳ ಪೈಕಿ ನಕ್ಸಲ್ ಚಳವಳಿ ಕೂಡ ಒಂದಾಗಿತ್ತು. ಮಲೆನಾಡಿಗರ ಮೇಲಾದ ಅಧಿಕಾರದ ಪ್ರಹಾರದಲ್ಲಿ ಸಹಿಸಲಾಗದೆ ಪೆಟ್ಟು ತಿಂದಾಗ ಮಲೆನಾಡಿಗರಿಂದಲೇ ಪ್ರತಿರೋಧಗಳು ಆರಂಭವಾದವು. ಈ ಪ್ರತಿರೋದದ ನಡುವೆ ಕೆಲವು ಯುವ ಮನಸ್ಸುಗಳು ಕೆಂಪು ಹಾದಿಯನ್ನ ಆಯ್ದುಕೊಂಡು ಕಾಡುದಾರಿಗೆ ಹೋಗಿದ್ದು, ಅಲ್ಲಿಂದ ಇಲ್ಲಿವರೆಗೂ ನಡೆದ ಘಟನೆಗಳೆಲ್ಲವೂ ಶಿವಮೊಗ್ಗದ ಪುಟಗಳಲ್ಲಿ ನೆತ್ತರಿನ ಸಹಿಯೊಂದಿಗೆ ದಾಖಲಿದೆ.
ಇದೀಗ ಸರಿಯಾದುದಲ್ಲದ ನಕ್ಸಲ್ ಹೆಸರಿನ ಅಧ್ಯಾಯ, ಕೊನೆ ಪುಟಕ್ಕೆ ಬಂದಿದೆ. ನಾಳೆ ಚಿಕ್ಕಮಗಳೂರಿನಲ್ಲಿ ರಾಜ್ಯದ ಕೊನೆ ಸಾಲಿನ ನಕ್ಸಲರು ಶರಣಾಗುತ್ತಿದ್ದಾರೆ. ಇದರ ನಡುವೆ ಕಾಡುವ ಸಂಗತಿ ಅಂದರೆ, ಉಡುಪಿಯ ಪೀತುಬೈಲ್‌ನಲ್ಲಿ ಗುಂಡಿಗೆ ಬಲಿಯಾದ ವಿಕ್ರಂಗೌಡ ಯಾರಿಗೂ ಬೇಡವಾದ ಹೆಣವಾಗಿದ್ದು.
ನಕ್ಸಲರ ಕಾರ್ಖಾನೆ ಎಂಬ ಅಪಖ್ಯಾತಿಯನ್ನ ಪಡೆದುಕೊಂಡ ಶಿವಮೊಗ್ಗದಲ್ಲಿ, ಅಷ್ಟೆ ಕಠಿಣ ಮನಸ್ಸಿನಿಂದ ನಕ್ಸಲರ ಮೂಲವನ್ನೆ ಎನ್‌ಕೌಂಟರ್ ಮಾಡಿದ ಅಧಿಕಾರಿಗಳು ಕೆಲಸ ಮಾಡಿದ್ದರು. ಪ್ರತಿಸಲ ಮಲೆನಾಡಲ್ಲಿ ವಿಚಿತ್ರ ಭಾವದ ನೋವು ಮೂಡಿಸ್ತಿದ್ದ ಎನ್‌ಕೌಂಟರ್‌ಗಳು ಇನ್ಮುಂದೆ ಇರದು ಎಂಬ ಸಮಾಧಾನ ತರುವ ಜೊತೆಗೆ ನಾಳಿನ ನಕ್ಸಲರ ಶರಣಾಗತಿ ಯಶಸ್ಸಾಗಲಿದೆ. ಆದಾಗ್ಯು ಶರಣಾಗುತ್ತಿರುವ ಮುಂಡಗಾರು ಲತಾ ಆಂಡ್ ಟೀಂನ ಮುಂದೆ ಸವಾಲುಗಳು ಸುಲಭವಾಗಿಲ್ಲ.
ಕಠಿಣ ಹಾದಿ
ನಕ್ಸಲರ ಶರಣಾಗತಿ ಬಗ್ಗೆ ಈಗಾಗಲೇ ಹಲವು ವರದಿ ಬಂದಿದೆ. ಆದಾಗ್ಯು ಈ ನಿಟ್ಟಿನಲ್ಲಿ ಮಲೆನಾಡು ಟುಡೆಗೆ ತುಸುಭಿನ್ನವಾದ ಮಾಹಿತಿಯೇ ಲಭ್ಯವಾಗಿದೆ. ಅಸಲಿಗೆ ವಿಕ್ರಂಗೌಡನ ಎನ್‌ಕೌಂಟರ್ ಬಳಿಕ ಪೊಲೀಸ್ ಇಲಾಖೆ ನಕ್ಸಲರಿಗೆ ಸ್ಟ್ರೈಟ್ ಫಾರವರ್ಡ್ ವಾರ್ನಿಂಗ್ ಕೊಟ್ಟಿತ್ತು. ಶರಣಾಗತಿ ಆಪ್ಶನ್‌ಗೂ ತಮಗೂ ಸಂಬಂಧವಿಲ್ಲವೇನೊ ಎಂಬಂತಿದ್ದ ಎಎನ್‌ಎಫ್ ಕಾರ್ಯಾಚರಣೆಗೆ ಅತ್ತ ಕೇರಳದ ಥಂಡರ್ ಬೋಲ್ಟ್ ನಿಂದ ಬೆದರಿಸಿಕೊಂಡು ಕರ್ನಾಟಕಕ್ಕೆ ಬಂದಿದ್ದ ಅಳಿದುಳಿದ ನಕ್ಸಲರು ಅಕ್ಷರಶಃ ನಲುಗಿ ಹೋಗಿದ್ದರು.
ಭಯ..ಭಯ..ಭಯ
ಪೊಲೀಸ್ ಭಯ, ಮಲೆನಾಡಲ್ಲಿ ಸಿಗದ ಬೆಂಬಲ. ಎರಡರ ಜೊತೆಯಲ್ಲಿ ಸುದೀರ್ಘ ಕಾಡು ಬದುಕಿನ ಓಟದಲ್ಲಿ ಬಸವಳಿದ ನಕ್ಸಲರ ಪರಿಸ್ಥಿತಿ ಸದ್ಯ ಹೇಗಿತ್ತು ಎಂದರೆ, ಒಂಟಿ ಮನೆಗಳಲ್ಲಿ ಅವರು ಊಟಕ್ಕಾಗಿ ಬೇಡುವ ಸ್ಥಿತಿ ಬಂದೊದಗಿತ್ತು. ಅಷ್ಟರಮಟ್ಟಿಗೆ ನಕ್ಸಲಿಸಂ ಕರ್ನಾಟಕದಲ್ಲಿ ನೆಲಕಚ್ಚಿತ್ತು. ಆದರೆ ತಪ್ಪಾದ ಹಾದಿ ಆಯ್ದ ಮೇಲೆ ಅದರಿಂದ ಹೊರಕ್ಕೆ ಬರುವುದು ಕಷ್ಟಸಾಧ್ಯ. ಹಾಗಾಗಿಯೇ ನಕ್ಸಲರು ಕಾಡು ಹಾಗೂ ಅಜ್ಞಾತ ನೆಲೆಯಲ್ಲಿದ್ದರು. ಕೋವಿಯ ಮಾತಿಗೆ ಕೋವಿಯಿಂದಲೇ ಉತ್ತರ ಸಿಗೋದು. ಏಕೆಂದರೆ, ಕೋವಿ ಹಿಡಿದ ಕೈ ಎದುರಾದ ಸನ್ನಿವೇಶದಲ್ಲಿ ತಮ್ಮ ಜೀವ ಉಳಿಸಿಕೊಳ್ಳುವುದೆ ಯುದ್ದ ನಿಯಮ. ಇಂತಹ ಸನ್ನಿವೇಶದಲ್ಲಿ ತಮಗೆ ತಾವೆ ಅತಂತ್ರರಾಗಿದ್ದ, ನಕ್ಸಲರ ಶರಣಾಗತಿಗೆ ಸಿಎಂ ಸಿದ್ದರಾಮಯ್ಯರವರೇ ಕರೆಕೊಟ್ಟಿದ್ದರು. ಅಲ್ಲದೆ ಅದಕ್ಕಾಗಿ ನಕ್ಸಲ್ ಶರಣಾಗತಿ ಹಾಗೂ ನಕ್ಸಲ್ ಪುನರ್‌ವಸತಿ ಸಮಿತಿಯನ್ನ ಮುಂಚೂಣಿಗೆ ತಂದಿದ್ದರು. ಇದರ ಫಲವಾಗಿ ನಾಳೆ ಆರು ನಕ್ಸಲರು ಶರಣಾಗುತ್ತಿದ್ದಾರೆ.
ಸಿದ್ದರಾಮಯ್ಯ ಸರ್ಕಾರ
ಅಂದಹಾಗೆ, ಲತಾ ಮುಂಡಗಾರು, ಸುಂದರಿ ಕುತ್ಲೂರು, ಬಾಳೆಹೊಳೆ ವನಜಾಕ್ಷಿ, ಮಾರೆಪ್ಪ ಅರೋಲಿ, ಕೆ.ವಸಂತ, ಟಿ.ಎನ್.ಜೀಶ್ ನಾಳೆ ಶರಣಾಗುತ್ತಿರುವ ನಕ್ಸಲರು. ಕಳೆದ ಜನವರಿ ನಾಲ್ಕರಂದು ನಕ್ಸಲ್ ಶರಣಾಗತಿ ಹಾಗೂ ನಕ್ಸಲ್ ಪುನರ್‌ವಸತಿ ಸಮಿತಿ ಹಾಗೂ ಶಾಂತಿಗಾಗಿ ನಾಗರಿಕರ ವೇದಿಕೆಯ ಒಟ್ಟು 8 ಸದಸ್ಯರು ಈ ನಕ್ಸಲರೊಂದಿಗೆ ರಹಸ್ಯ ಸ್ಥಳದಲ್ಲಿ ನಡೆಸಿದ ಮಾತುಕತೆ ಯಶಸ್ವಿಯಾಗಿದೆ. ಇನ್ನೊಂದು ರೀತಿಯಲ್ಲಿ, ಮುಖ್ಯವಾಹಿನಿಗೆ ಬರುವುದಿಲ್ಲ ಎನ್ನುತ್ತಿದ್ದ ನಕ್ಸಲರ ಮನವೊಲಿಕೆಗೆ ಸಿಎಂ ಸಿದ್ದರಾಮಯ್ಯ ಹಾಗೂ ಗೃಹಇಲಾಖೆ ತೋರಿದ ಮಾನವೀಯತೆಯು ಕೆಲಸ ಮಾಡಿದೆ. ವಿಕ್ರಂಗೌಡನ ಎನ್‌ಕೌಂಟರ್ ಬಳಿಕ ಗೃಹಇಲಾಖೆ ನಕ್ಸಲ್ ವಿರುದ್ಧದ ಆಪರೇಷನ್‌ನ ವೇಗಕ್ಕೆ ತಾತ್ಕಾಲಿಕ ತಡೆ ನೀಡಿತ್ತು. ಜೊತೆಯಲ್ಲಿ ಸಿದ್ದರಾಮಯ್ಯ ಸರ್ಕಾರ, ಮುಖ್ಯವಾಹಿನಿಗೆ ಬರುವವರಿಗೆ ನೆರವಿನ ಭರವಸೆ ನೀಡಿದೆ. ಸರ್ಕಾರದ ಭರವಸೆ ಹಾಗೂ ಸರ್ಕಾರದ ಪ್ರತಿನಿಧಿಯಾಗಿ ಭೇಟಿಯಾದವರ ಮನವೊಲಿಕೆಯ ಫಲವಾಗಿ ನಾಳೆ ನಕ್ಸಲರು ಶರಣಾಗುತ್ತಿದ್ದಾರೆ.
ಎಎನ್‌ಎಫ್ ಕಾರ್ಯಾಚರಣೆ
ಹೌದು, ವಿಕ್ರಂಗೌಡನ ಎನ್‌ಕೌಂಟರ್ ಆದ ಕೆಲವೆ ದಿನದಲ್ಲಿ ಮತ್ತೊಮ್ಮೆ ನಕ್ಸಲರ ತಂಡ ಎಎನ್‌ಎಫ್‌ಗೆ ಸೈಟ್ ಆಗಿತ್ತು, ಆದರೆ ಕಾಡಿನ ನಡುವಲ್ಲಾದ ಗೊಂದಲ, ಅಂದು ನಕ್ಸಲರ ಜೀವ ಉಳಿಸಿತ್ತು ಎನ್ನಲಾಗುತ್ತಿದೆ. ಅಲ್ಲದೆ ತೀರಾ ಇತ್ತೀಚೆಗೆ ಬೆಳ್ತಂಗಡಿಯ ಸಮೀಪ ಒಂಟಿ ಮನೆಯೊಂದಕ್ಕೆ ಇದೇ ನಕ್ಸಲರ ತಂಡ ವಿಸಿಟ್ ಮಾಡಿತ್ತು. ಈ ಮಾಹಿತಿ ಪೊಲೀಸ್ ಇಲಾಖೆಗಿತ್ತು ಎನ್ನಲಾಗುತ್ತೆ. ಹಲವು ಹೊತ್ತು ಮನೆಯೊಂದರಲ್ಲಿದ್ದು, ಊಟ ಮುಗಿಸಿ ತೆರಳಿದ್ದ ನಕ್ಸಲರ ತಂಡ ಅಂದು ಸಹ ಕಾರಣವೊಂದಕ್ಕೆ ಬಚಾವ್ ಆಗಿತ್ತು ಎನ್ನುತ್ತದೆ ಇಂಟೆಲಿಜೆನ್ಸ್ ಮೂಲ. ಇದೀಗ ಶರಣಾಗತಿ ಪ್ಯಾಕೆಜ್‌ನಡಿಯಲ್ಲಿ ಅವರು ಮುಖ್ಯವಾಹಿನಿಗೆ ಬರದಿದ್ದರೇ, ಮುಂದೆಯು ಇಂತಹುದ್ದೆ ಅಪಾಯಗಳನ್ನ ನಕ್ಸಲರು ಎದುರಿಸಬೇಕಾಗಿತ್ತು.
ಶರಣಾಗತಿ ಬೇಳೆ ಕಾಳು
ವಿಚಿತ್ರ ನೋಡಿ, ಮುಖ್ಯವಾಹಿನಿಗೆ ನಕ್ಸಲರು ಬರುತ್ತಿದ್ದರೆ, ಇತ್ತ ಅವರ ಹೆಸರಲ್ಲಿ ಕ್ರೆಡಿಟ್ ಪಡೆದುಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಇದು ಸರಿಯಾದುದಲ್ಲ. ಈ ವಿಚಾರವಾಗಿ ನಕ್ಸಲ್ ಶರಣಾಗತಿ ಹಾಗೂ ಪುನರ್‌ವಸತಿ ಸಮಿತಿ ಸದಸ್ಯರೊಬ್ಬರು ಪತ್ರವೊಂದು ಬರೆದು ಆಕ್ಷೇಪ ವ್ಯಕ್ತಪಡಿಸಿ ನಕ್ಸಲ್ ಶರಣಾಗತಿಯ ವಿಚಾರವನ್ನು ಸ್ವಹಿತಾಸಕ್ತಿಗಾಗಿ ಯಾರೂ ಸಹ ಬಳಸಿಕೊಳ್ಳಬಾರದು ಎಂದಿದ್ದಾರೆ. ನಕ್ಸಲರು ಶರಣಾಗಲು ಸಮಿತಿ ಕಾರಣವಲ್ಲ. ಬದಲಾದ ಸನ್ನಿವೇಶವೇ ಕಾರಣ ಎಂದಿರುವ ಸಮಿತಿ ಸದಸ್ಯರು, ಈ ವಿಷಯದಲ್ಲಿ ಸಭ್ಯತೆಯಿಂದ ವರ್ತಿಸುವಂತೆ ಒತ್ತಾಯಿಸಿದ್ದಾರೆ. ಹಾಗೆ ನೋಡಿದರೆ, ಸಿದ್ದರಾಮಯ್ಯ ಸರ್ಕಾರಕ್ಕೆ ಇದರ ಪೂರ್ಣ ಕ್ರೆಡಿಟ್ ಸಲ್ಲಬೇಕು. ಆದರೆ ಸರ್ಕಾರದ ಕ್ರೆಡಿಟ್ ತಮ್ಮ ಹೆಸರಿಗೆ ದಾಟಿಸಿಕೊಳ್ಳುವ ಪ್ರಯತ್ನ ಯಾರಿಗಾದರೂ ಒಳ್ಳೆಯದಲ್ಲ
ಎನ್‌ಐಎ ಆತಂಕ
ನಾಳೆ ಶರಣಾಗುವ ನಕ್ಸಲರಿಗೆ ಬದಲಾದ ಕಾನೂನು ನಿಯಮಗಳು ಸಹ ಸಂಕಷ್ಟ ತಂದೊಡ್ಡುವ ಸಾಧ್ಯತೆ ಇದೆ. ಶಸ್ತ್ರಾಸ್ತ್ರದ ವಿಚಾರ ಹಾಗೂ ಯುಎಪಿಎ ಆಕ್ಟ್ ನಲ್ಲಿ ಎನ್‌ಐಎ ಪ್ರವೇಶ ಪಡೆದರೆ ಅದು ಮುಖ್ಯವಾಹಿನಿಗೆ ಬಂದರಿಗೆ ಸಮಸ್ಯೆಯಾಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಸರ್ಕಾರ ನೀಡಿರುವ ಭರವಸೆಗಳು ಶರಣಾಗುತ್ತಿರುವ ನಕ್ಸಲರಿಗೆ ಆಸರೆಯಾಗಬೇಕಿದೆ. ಒಟ್ಟಾರೆ, ಕಾಡಿನ ಬೇಲಿಯಿಂದ ಆಚೆ ಬಂದು ನಕ್ಸಲರು ಮುಖ್ಯವಾಹಿನಿಗೆ ಬರುತ್ತಿದ್ದಾರೆ. ಅವರಿಗೆ ಶುಭವಾಗಲಿ, ಕಾಡು, ನಾಡು ನೆಮ್ಮದಿಯಿಂದರಲಿ.
SUMMARY | Naxals Lata Mundagaru, Sundari Kuthlur, Balehole Vanajakshi, Mareppa Aroli, K. Vasantha, T.N. Jeesh to surrender tomorrow
KEY WORDS | Naxals Lata Mundagaru, Sundari Kuthlur, Balehole Vanajakshi, Mareppa Aroli, K. Vasantha, T.N. Jeesh to surrender tomorrow