ದೊಡ್ಡೇರಿ ಶಾಂತು ಕೊಲೆಯ ಹಿಂದೆ ದೊಡ್ಡವರ ಕೈವಾಡ? ಪೊಲೀಸರು ಸ್ಥಳಕ್ಕೆ ಹೋಗದಿದ್ದರೆ ಮತ್ತೆರಡು ಹೆಣ ಬೀಳ್ತಿತ್ತಾ | JP ಬರೆಯುತ್ತಾರೆ
Bhadravati Rural Police Station, Bhadravati Dodderi Murder Case, JP writes

SHIVAMOGGA | MALENADUTODAY NEWS | ಮಲೆನಾಡು ಟುಡೆ Jan 23, 2025
ದೊಡ್ಡೇರಿ ಕೊಲೆಯ ಹಿಂದೆ ದೊಡ್ಡವರ ಕೈವಾಡವಿದೆಯಾ...ಸಕಾಲಕ್ಕೆ ಪೊಲೀಸರು ಹೋಗದಿದ್ದರೆ ಬೀಳುತ್ತಿತ್ತು ಮತ್ತೆರಡು ಹೆಣ...JP ಬರೆಯುತ್ತಾರೆ
ನಿನ್ನೆಯ ಬುಧವಾರ ಕರಾಳ ದಿನ ಎನಿಸಿತ್ತು. ಏಕೆಂದರೆ ಹಲವೆಡೆ ಅಪಘಾತದಂತಹ ದುರಂತಗಳು ನಡೆದಿದ್ದವು. ಇದರ ನಡುವೆ ಭದ್ರಾವತಿಯ ರಾಜಕಾರಣದ ನಿಮಿತ್ತ, ನಿನ್ನೆದಿನ ಉಕ್ಕಿನ ನಗರದಲ್ಲೊಂದು ಕೊಲೆ ನಡೆದಿದೆ. ತಾಲ್ಲೂಕಿನ ಮಟ್ಟಿಗೆ ಇದು ಮತ್ತೊಂದು ಕರಾಳ ಘಟನೆ. ಮೇಲ್ನೋಟಕ್ಕೆ ಇದು ಟ್ರಾನ್ಸ್‌ಫಾರ್ಮರ್ ವಿಚಾರದಲ್ಲಿ ಆದ ಘಟನೆ ಎಂದು ಹೇಳಲಾಗುತ್ತಿದೆಯಾದರೂ, ಹರಿದ ನೆತ್ತರು ಬೇರೆಯದ್ದೆ ಕಥೆಯನ್ನು ಹೇಳುತ್ತಿದೆ.
ಇದು ರಾಜಕೀಯ ಜೀವನದಲ್ಲಿ ಅರಳಿದ ವೈಮನಸ್ಸು, ವೈಯಕ್ತಿಕ ದ್ವೇಷದಲ್ಲಿ ಕಮರಿ ಕೊಲೆಯಾಗಿದೆ ಎಂದು ದೊಡ್ಡೇರಿಯ ಹಳ್ಳಿ ಕಟ್ಟೆಯ ಮೂಲಗಳು ಸಾರಿ ಸಾರಿ ಹೇಳುತ್ತಿದೆ. ಕಳೆದ ರಾತ್ರಿ ಹತ್ತು ಗಂಟೆಯ ಹೊತ್ತಿಗೆ ಭದ್ರಾವತಿಯ ದೊಡ್ಡೇರಿ ಗ್ರಾಮದಲ್ಲಿ ಗಲಾಟೆಯಾಗಿದ್ದು, ಓರ್ವನ ಕೊಲೆಯಾಗಿದೆ. ಶಾಂತ ಕುಮಾರ್ (35) ಕೊಲೆಯಾದ ದುರ್ದೈವಿ. ಲೇಪಾಕ್ಷಿ ಕೊಲೆ ಮಾಡಿದ ಆರೋಪಿ. ಶಾಂತ ಕುಮಾರ್ ಜೆಡಿಎಸ್‌ನಲ್ಲಿ ಗುರುತಿಸಿಕೊಂಡಿದ್ದರೆ, ಮಲ್ಲೇಶ್ ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡು ಗ್ರಾಮದಲ್ಲಿ ರಾಜಕೀಯ ಮಾಡುತ್ತಿದ್ದವರು
ಕೊಲೆಯಾದ ಶಾಂತಕುಮಾರ್ ಮೇಲೂ ಸಣ್ಣ ಕೇಸ್ ಗಳಿವೆ. ಮಲ್ಲೇಶ್ ವಿರುದ್ಧವೂ ಕೇಸ್ ಗಳು ದಾಖಲಾಗಿವೆ. ಇವರಿಬ್ಬರ ನಡುವಿನ ರಾಜಕೀಯ ಹಗೆ ನೆನ್ನೆ ಮೊನ್ನೆಯದಲ್ಲ. ಈ ಹಿಂದೆ ಶಾಂತ ಕುಮಾರ್ ಗ್ರಾಮ ಪಂಚಾಯಿತಿ ಸದಸ್ಯನಾಗಿದ್ದರೆ, ಪ್ರಸ್ತುತ ಲೇಪಾಕ್ಷಿ ಪತ್ನಿ ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದಾರೆ. ಸೋತು ಗೆದ್ದವರ ನಡುವೆ ಶೀತಲ ಸಮರ ನಡೆಯುತ್ತಿತ್ತು. ಇದು ಸ್ಫೋಟಗೊಳ್ಳಲು ಕಾರಣಬೇಕಿತ್ತು. ಆ ಕಾರಣ ಟ್ರಾನ್ಸ್ ಪಾರ್ಮರ್ ವಿಚಾರದಲ್ಲಿ ಸಿಕ್ಕಿಬಿಟ್ಟಿತ್ತು. ಇಲ್ಲಿ ಕೊಲೆಗೆ ಹೊಸ ಮಚ್ಚುಗಳನ್ನೇ ಬಳಸಿದ್ದಾರೆ ಎಂದರೆ, ಎಲ್ಲವೂ ಪ್ರೀ ಪ್ಲಾನ್ ಮರ್ಡರ್ ಎಂಬುದು ನಿರ್ವಿವಾದ.
ನೆನ್ನೆ ರಾತ್ರಿ ದೊಡ್ಡೇರಿ ಗ್ರಾಮದಲ್ಲಿ ಗದ್ದೆಯಲ್ಲಿದ್ದ ಶಾಂತಕುಮಾರ್ ಮೇಲೆ. ಲೇಪಾಕ್ಷಿ ತನ್ನ ಗೆಳೆಯರ ಜೊತೆಗೂಡಿ ಅಟ್ಯಾಕ್ ಮಾಡಿದ್ದಾನೆ. ರಕ್ತದ ಮಡುವಿನಲ್ಲಿದ್ದ ಶಾಂತಕುಮಾರ್ ಕಾಲಿಗೆ ಬಲವಾದ ಪೆಟ್ಟು ಬಿದ್ದಿದೆ. ಈ ಸಂದರ್ಭದಲ್ಲಿ ಸ್ಥಳಕ್ಕಾಗಮಿಸಿದ ಶಾಂತಕುಮಾರ್ ಗೆಳೆಯರು ಲೇಪಾಕ್ಷಿಯನ್ನು ಹಿಡಿದು ಥಳಿಸಿದ್ದಾರೆ. ಆದರೆ ಲೇಪಾಕ್ಷಿ ಅಲ್ಲಿಂದ ತಪ್ಪಿಸಿಕೊಂಡಿದ್ದಾನೆ. ಕಾಲಿನಿಂದ ನೆತ್ತರೂ ಸಂಪೂರ್ಣವಾಗಿ ಹೊರಹೋಗಿದ್ದರಿಂದ ಶಾಂತಕುಮಾರ್ ಸಾವನ್ನಪ್ಪಿದ್ದಾನೆ.
ರೊಚ್ಚಿಗೆದ್ದ ಗ್ರಾಮಸ್ಥರು ಲೇಪಾಕ್ಷಿ ಮನೆಯನ್ನು ಹಾನಿಗೊಳಿಸಿದ್ದಾರೆ.ಗ್ರಾಮದಲ್ಲಿ ಘಟನೆ ನಡೆದ ಸುದ್ದಿ ತಿಳಿಯುತ್ತಿದ್ದಂತೆ ಭದ್ರಾವತಿ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿದ್ದಾರೆ. ಪೊಲೀಸರು ಸಕಾಲಕ್ಕೆ ಆಗಮಿಸದೇ ಹೋಗಿದ್ದಲ್ಲಿ ಗ್ರಾಮದಲ್ಲಿ ಲೇಪಾಕ್ಷಿ ಹಾಗು ಕೃತ್ಯದಲ್ಲಿದ್ದ ಆತನ ಗೆಳೆಯರು ಬದುಕುಳಿಯುವುದೇ ಕಷ್ಟವಾಗುತ್ತಿತ್ತು ಎನ್ನುತ್ತಾರೆ ಗ್ರಾಮಸ್ಥರು. ಎಸ್ಪಿ ಮಿಥುನ್ ಕುಮಾರ್ ರಾತ್ರಿ ಘಟನಾ ಸ್ಥಳಕ್ಕೆ ತೆರಳಿ, ಪರಿಸ್ಥಿತಿಯನ್ನ ಅವಲೋಕಿಸಿದ್ದಾರೆ. ಗ್ರಾಮದಲ್ಲಿ ಬಿಗುವಿನ ವಾತಾವರಣವಿದ್ದು ಹೆಚ್ಚಿನ ಪೊಲೀಸ್ ಬಂದೋ ಬಸ್ತ್ ಮಾಡಲಾಗಿದೆ.
ಶಾಂತಕುಮಾರ್ ಸಾವಿನಿಂದ ವಂಶದಲ್ಲಿ ಗಂಡು ಸಂತಾನವೇ ಇಲ್ಲದಂತಾಗಿದೆ. ಶಾಂತಕುಮಾರ್ ಸಹೋದರರಿಬ್ಬರೂ, ಈ ಹಿಂದೆ ಸಾವನ್ನಪ್ಪಿದ್ದಾರೆ. ಮೃತ ಶಾಂತಕುಮಾರ್ ಪತ್ನಿ ಗರ್ಭಿಣಿಯಾಗಿದ್ದು, ಗಂಡನ ಸಾವಿನಿಂದ ಕಂಗಾಲಾಗಿದ್ದಾರೆ. ಭದ್ರಾವತಿ ಪೊಲೀಸರು ಲೇಪಾಕ್ಷಿಯನ್ನು ಬಂಧಿಸಿದ್ದಾರೆ. ಸಧ್ಯ ಭದ್ರಾವತಿಯಲ್ಲಿ ಪರಿಸ್ಥಿತಿ ಶಾಂತವಾಗಿದೆ.
SUMMARY | Bhadravati Rural Police Station, Bhadravati Dodderi Murder Case, JP writes
KEY WORDS | Bhadravati Rural Police Station, Bhadravati Dodderi Murder Case, JP writes