ಶಾಸಕ ವೇತನ ಜಾಸ್ತಿ, ಬೆನ್ನಲ್ಲೆ ಗ್ರಾಹಕರಿಗೆ ಹೊರೆ | ಏಪ್ರಿಲ್‌ 1 ರಿಂದ ಹಾಲು, ಕರೆಂಟ್‌ ದುಬಾರಿ!?

13

SHIVAMOGGA| MALENADUTODAY NEWS | ಮಲೆನಾಡು ಟುಡೆ  Mar 28, 2025 ‌‌ ‌‌

ರಾಜ್ಯಸರ್ಕಾರ ಮಧ್ಯಮವರ್ಗದ ಮಂದಿಗೆ ಒಂದೇ ದಿನ ಎರಡು ಶಾಕ್‌ ನೀಡಿದೆ ಒಂದು ಕಡೆ ಹಾಲಿನ ದರ ಹೆಚ್ಚಿಗೆಗೆ ಸಂಪುಟ ಅನುಮೋದನೆ ನೀಡಲಾಗಿದೆ. ಇನ್ನೊಂದೆಡೆ ನಿನ್ನೆಯೇ ಗುರುವಾರ ವಿದ್ಯುತ್‌ ದರವನ್ನು  36 ಪೈಸೆ ಹೆಚ್ಚಳಕ್ಕೆ  ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ  ಸಮ್ಮತಿಸಿದೆ. ಏಪ್ರಿಲ್‌ 1ರಿಂದಲೇ ಈ ದರಗಳು ಅನ್ಯಯವಾಗಲಿದೆ.  

ಹಾಲು, ಮೊಸರು ಲೀಟರ್‌ಗೆ ₹4 ಜಾಸ್ತಿ

ಹಾಲಿನ ದರ ಏರಿಕೆ ಮಾಡುವಂತೆ  ಕರ್ನಾಟಕ ಹಾಲು ಮಹಾಮಂಡಳಿ KMF ಸಲ್ಲಿಸಿದ್ದ ಪ್ರಸ್ತಾವಕ್ಕೆ ನಿನ್ನೆದಿನ ಸಚಿವ ಸಂಪುಟ ಸಭೆ ಅಸ್ತು ಎಂದಿದೆ.  ಈ ಸಂಬಂಧ ಕಳೆದ ವರ್ಷ 50 ಮಿಲಿ ಲೀಟರ್‌ ಹಾಲು ಹೆಚ್ಚಳ ಮಾಡಿ, ಲೀಟರ್‌ಗೆ 42 ರೂಪಾಯಿ ಇದ್ದ ಹಾಲಿನ ದರವನ್ನು 44 ರೂಪಾಯಿಗೆ ಏರಿಕೆ ಮಾಡಲಾಗಿತ್ತು. 

ಇದೀಗ ಮೊದಲಿದ್ದ ದರ ಅಂದರೆ ಲೀಟರ್‌ಗೆ 42 ರೂಪಾಯಿ ಇದ್ದ ಹಾಲಿನ ದರಕ್ಕೆ ನಾಲ್ಕು ರೂಪಾಯಿ ಹೆಚ್ಚಳ ಮಾಡಿ ಅಂದರೆ, 46 ರೂಪಾಯಿಯಂತೆ  ಲೀಟರ್‌ ಹಾಲು ಮಾರಾಟ ಮಾಡಲಾಗುತ್ತಿದೆ. ಈ ದರ ಎಪ್ರಿಲ್‌ ಒಂದರಿಂದ ಜಾರಿಗೆ ಬರಲಿದೆ. 

ವಿದ್ಯುತ್‌ ದರ ಜಾಸ್ತಿ

ಇನ್ನೊಂದೆಡೆ ರಾಜ್ಯ ಸರ್ಕಾರ, ಗೃಹ ಬಳಕೆ ವಿದ್ಯುತ್‌ ದರದಲ್ಲಿ, ಪ್ರತಿ ಯೂನಿಟ್‌ಗೆ 36 ಪೈಸೆ ಹೆಚ್ಚುವರಿ ಶುಲ್ಕ ವಿಧಿಸಿದೆ. ಮೆಸ್ಕಾಂ ಸಿಬ್ಬಂದಿಯ ಪಿಎಫ್‌ ಹಾಗೂ ಗ್ರಾಚುಟಿ ಹಣಕ್ಕೆ ಸಂಬಂಧಿಸಿದ ಹೊರೆಯನ್ನು ಗ್ರಾಹಕರಿಂದ ವಸೂಲಿ ಮಾಡುವ ಪ್ರಸ್ತಾಪಕ್ಕೆ  ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ಸಮ್ಮತಿಸಿದೆ. ಈ ಹಿನ್ನೆಲೆಯಲ್ಲಿ ಏಪ್ರಿಲ್‌ ಒಂದರಿಂದ ಪ್ರತಿ ಯೂನಿಟ್‌ಗೆ ಹೆಚ್ಚುವರಿಯಾಗಿ 36 ಪೈಸೆ ಶುಲ್ಕ ಬೀಳಲಿದ್ದು, ವಿದ್ಯುತ್‌ ಬಿಲ್‌ ಜಾಸ್ತಿ ಬರಲಿದೆ. 

ಇನ್ನು ರಾಜ್ಯಸರ್ಕಾರದ ನಡೆಯು ಸಾಕಷ್ಟು ವಿರೋಧಕ್ಕೂ ಒಳಗಾಗುತ್ತಿದೆ. ಇತ್ತೀಚೆಗೆ ಶಾಸಕರು ಸದನದಲ್ಲಿ ತಮ್ಮ ವೇತನವನ್ನು ಹೆಚ್ಚಿಸಿಕೊಂಡಿದ್ದರು. ಇದೀಗ ಮಧ್ಯಮವರ್ಗದ ಮೇಲೆ ದರ ಏರಿಕೆಯ ಬಾರವನ್ನು ಹೊರಿಸುತ್ತಿದ್ದಾರೆ ಎಂಬ ಟೀಕೆ ವ್ಯಕ್ತವಾಗುತ್ತಿದೆ. 

Share This Article