SHIVAMOGGA | MALENADUTODAY NEWS | ಮಲೆನಾಡು ಟುಡೆ |Nov 19, 2024
ಶಿವಮೊಗ್ಗ : ರಾಜ್ಯ ಸರ್ಕಾರ ವಿದ್ಯುತ್ ಖಾಸಗೀಕರಣನ್ನು ವಿರೋಧಿಸಿ ಹಾಗೂ 25 ಬೇಡಿಕೆಗಳನ್ನು ಈಡೇರಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ನವೆಂಬರ್ 26 ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಎದುರು ರೈತರ ಕಾರ್ಮಿಕರ ಎಚ್ಚರಿಕಾ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಹೆಚ್.ಆರ್. ಬಸವರಾಜಪ್ಪ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ರೈತರ ಸಮಸ್ಯೆಗಳನ್ನು ಬಗೆಹರಿಸುತ್ತಿಲ್ಲ. ಕಾರ್ಮಿಕರ ಸಮಸ್ಯೆಗಳು ಕೂಡ ಹಾಗೆಯೇ ಇವೆ. ಬೆಳೆಗೆ ವೈಜ್ಞಾನಿಕ ಬೆಲೆ ಸಿಗುತ್ತಿಲ್ಲ. ಕಾರ್ಮಿಕರಿಗೆ ಕನಿಷ್ಠ ವೇತನ ಇಲ್ಲ. ವಿದೇಶಿ ಕಂಪನಿಗಳ ಮಾಲ್ ಸಂಸ್ಕೃತಿಯಿಂದಾಗಿ ಸ್ಥಳೀಯ ವ್ಯಾಪಾರಸ್ಥರು, ರೈತರು ಸಂಕಷ್ಟದಲ್ಲಿದ್ದಾರೆ. ಅದರಲ್ಲೂ ವ್ಯಾಪಾರಸ್ಥರು ಅಂಗಡಿ ಮುಚ್ಚಬೇಕಾದ ದುಃಸ್ಥಿತಿ ಬಂದಿದೆ ಎಂದು ಆರೋಪಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೊಟ್ಟ ಮಾತಿಗೆ ತಪ್ಪಿ ನಡೆಯುತ್ತಿವೆ. ಚುನಾವಣೆ ಮತ್ತು ರೈತರ ಹೋರಾಟದ ಸಂದರ್ಭಗಳಲ್ಲಿ ಲಿಖಿತ ರೂಪದಲ್ಲಿ ನೀಡಿದ್ದ ಭರವಸೆ ಈಡೇರಿಸಿಲ್ಲ. ರಾಜ್ಯ ಸರ್ಕಾರ ಕೃಷಿ ಕಾಯ್ದೆಗಳನ್ನು ವಾಪಸ್ ತೆಗೆದುಕೊಂಡಿಲ್ಲ. ಬೇಡಿಕೆಗಳು ಹಾಗೆಯೇ ಉಳಿದುಕೊಂಡಿವೆ. ಹೀಗಾಗಿ ರೈತ ಸಂಘಟನೆಗಳ ಒಕ್ಕೂಟವಾದ ಸಂಯುಕ್ತ ಕಿಸಾನ್ ಮೋರ್ಚಾ ಹಾಗೂ ಕಾರ್ಮಿಕ ಸಂಘಟನೆಗಳ ಒಕ್ಕೂಟ ಜೆಸಿಟಿಯು ದೇಶದಾದ್ಯಂತ 500 ಜಿಲ್ಲೆಗಳಲ್ಲಿ ಎಚ್ಚರಿಕೆ ರ್ಯಾಲಿ ನಡೆಸಲು ನಿರ್ಧರಿಸಿದೆ ಎಂದರು.
ಕಳಸ ಬಂಡೂರಿ ಮಹಾದಾಯಿ ಯೋಜನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಬೇಕು. ಎಂ.ಎಸ್.ಪಿ.ಯನ್ನು ಕಾನೂನುಬದ್ದ ಮಾಡಬೇಕು. ಬೆಳೆ ವಿಮೆ ಜಾರಿಯಾಗಬೇಕು. ವಿದ್ಯುತ್ ಖಾಸಗೀ ಕರಣ ಆಗಬಾರದು. ಕೃಷಿ ಉಪಕರಣಗಳ ಮೇಲಿ ಜಿ.ಎಸ್.ಟಿ. ರದ್ದು ಮಾಡಬೇಕು. ರೈತರ ಸಾಲ ಮನ್ನಾ ಮಾಡಬೇಕು. ರಾಷ್ಟ್ರೀಕೃತ ಬ್ಯಾಂಕ್ ಗಳು ರೈತರಿಗೆ ಸಾಲ ನೀಡುವಾಗ ಸಿಬಿಲ್ ಅನ್ನು ಪರಿಗಣನೆ ಮಾಡಬಾರದು. ರೈತರ ಬೆಳೆಗಳಿಗೆ ಬೆಂಬಲ ನೀಡಬೇಕು ಎಂದು ಒತ್ತಾಯಿಸಿದರು.
ಮುಳುಗಡೆ ಹಾಗೂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಬೇಕು. ನೀರಾವರಿ ಯೋಜನೆಗಳು ಜಾರಿಯಾಗಬೇಕು. ಕಾರ್ಮಿಕ ವಿರೋಧಿ ಕಾಯ್ದೆ ರದ್ದಾಗಬೇಕು. ಉದ್ಯೋಗ ಭದ್ರತೆ ಸಿಗಬೇಕು. ದುಡಿಮೆಯ ಅವಧಿಯನ್ನು 8 ಗಂಟೆಯಿಂದ 12 -18 ಗಂಟೆಯವರೆಗೆ ಏರಿಸಲಾಗಿದೆ. ಇದನ್ನು ಹಿಂಪಡೆಯಬೇಕು. ಎಲ್ಲರಿಗೂ ಉಚಿತ ಆರೋಗ್ಯ, ಶಿಕ್ಷಣ ನೀಡಬೇಕು ಎಂಬುದು ಸೇರಿದಂತೆ ಸುಮಾರು 25ಕ್ಕೂ ಹೆಚ್ಚು ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದರು.
SUMMARY| The Karnataka Rajya raitha Sangha and The Green Sena will hold a farmers’ workers’ awareness rally in front of the Deputy Commissioner’s office at 10 am on 26 Nov.
KEYWORDS| Karnataka Rajya raitha Sanggha, Deputy Commissioner’s office, awareness rally, shivamogga,