SHIVAMOGGA | MALENADUTODAY NEWS | Apr 25, 2024
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಕೋಣಂದೂರಿನಲ್ಲಿ ವಿದ್ಯಾರ್ಥಿಯೊಬ್ಬನನ್ನು ದುಡ್ಡಿಗಾಗಿ ಪೀಡಿಸಿ ಹಲ್ಲೆ ಮಾಡಿದ ಘಟನೆ ಬಗ್ಗೆ ತೀರ್ಥಹಳ್ಳಿ ಪೊಲೀಸ್ ಸ್ಟೇಷನ್‌ನಲ್ಲಿ ಎಫ್‌ಐಆರ್ ದಾಖಲಾಗಿದೆ.

ನಡೆದಿದ್ದೇನು?
ಕಾಲೇಜಿಗೆ ಹೋಗುವ ವಿದ್ಯಾರ್ಥಿಯೊಬ್ಬನನ್ನ ಮೂವರು ಯುವಕರು ಪದೇಪದೇ ದುಡ್ಡಿಗಾಗಿ ಪೀಡಿಸ್ತಿದ್ದರಂತೆ. ಅಲ್ಲದೆ ಇದೇ ಕಾರಣಕ್ಕೆ ನಿಂದಿಸುವುದು, ಅವಾಚ್ಯು ಶಬ್ದಗಳಿಂದ ಬೈದು ಹೆದರಿಸುತ್ತಿದ್ದರು ಎಂದು ಆರೋಪಿಸಲಾಗಿದೆ. ಕಳೆದ 22 ನೇ ತಾರೀಖು ಇದೇ ರೀತಿ ಬೇಕರಿಯೊಂದರ ಬಳಿ ಯುವಕರು ಹಣ ಕೇಳಿದಾಗ, ಪ್ರಾಪ್ತ ವಯಸ್ಸಿನ ವಿದ್ಯಾರ್ಥಿ ವಿರೋಧ ಮಾಡಿದ್ದಾನೆ. ನಾನ್ಯಾಕೆ ಹಣ ನೀಡಬೇಕು ಎಂದು ಪ್ರಶ್ನಿಸಿದ್ದಾನೆ. ಇದಕ್ಕೆ ಪ್ರತಿಯಾಗಿ ಯುವಕರು ಶಾಮಿಯಾನದ ಗೂಟ ಬಿಗಿಯಾಗಿಸಲು ಹಗ್ಗ ಕಟ್ಟಲು ಬಳಸುವ ಕಬ್ಬಿಣದ ರಾಡಿನಿಂದ ಹಲ್ಲೆ ಮಾಡಿದ್ದಾರೆ. ಯುವಕರ ಹಲ್ಲೆಯಿಂದಾಗಿ ಗಾಯಗೊಂಡ ವಿದ್ಯಾರ್ಥಿಯನ್ನ ಮೊದಲು ತೀರ್ಥಹಳ್ಳಿ ಆಸ್ಪತ್ರೆ ಆನಂತರ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸಲಾಗಿದೆ. ಆಸ್ಪತ್ರೆಯಲ್ಲಿ ಆತ ನೀಡಿದ ಹೇಳಿಕೆ ಆಧರಿಸಿ ಮೂವರ ವಿರುದ್ಧ ಕೇಸ್ ದಾಖಲಿಸಲಾಗಿದೆ.
