SHIVAMOGGA | MALENADUTODAY NEWS | ಮಲೆನಾಡು ಟುಡೆ | Jan 28, 2025
ಶಿವಮೊಗ್ಗ | ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳು ಮೂಲಕ ಬಡ ಕುಟುಂಬಗಳ ಸಹಕಾರಕ್ಕೆ ನಿಂತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪ ಹೇಳಿದರು.
ಸಾಗರ ತಾಲೂಕು ಕಾನಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾನಲೆ ಗ್ರಾಮದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರೂ.13.90 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಶಾಲಾ ಕೊಠಡಿಯನ್ನು ಉದ್ಘಾಟಿಸಿ ಮಾತನಾಡಿದ ಅವರು ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಕುಟುಂಬದಲ್ಲಿ ಓರ್ವ ದುಡಿಯುವ ವ್ಯಕ್ತಿ ರೀತಿಯಲ್ಲಿ ಬೆಂಬಲಕ್ಕೆ ನಿಂತಿವೆ ಎಂದರು.ಮಕ್ಕಳಿಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ನಮ್ಮ ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಒದಗಿಸಿದೆ. ಅದರ ಸದುಪಯೋಗವನ್ನು ಉತ್ತಮ ರೀತಿಯಲ್ಲಿ ಪಡೆದುಕೊಳ್ಳಬೇಕು. ಶಿಕ್ಷಕರು ಮಕ್ಕಳ ಹಾಜರಾತಿ ಬಗ್ಗೆ ಗಮನ ಹರಿಸಿ, ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ದಾರಿ ಮಾಡಿಕೊಡಬೇಕು ಎಂದರು.

ಹಾಗೆಯೇ ಮುಂದಿನ ದಿನಗಳಲ್ಲಿ ಅಭಿವೃದ್ದಿ ಕೆಲಸಗಳಿಗೆ ಚುರುಕು ನೀಡಲಾಗುವುದು. ಸಾರ್ವಜನಿಕರ ಭೇಟಿ ಮಾಡಿ ಕುಂದು ಕೊರತೆ ಅಹವಾಲು ಸ್ವೀಕರಿಸಿ, ಸಮಸ್ಯೆಗಳ ಪರಿಹಾರದ ಕಡೆ ಗಮನ ಹರಿಸಲಾಗುವುದು ಹಾಗೂ ಅಗತ್ಯವಿರುವ ಶಾಲೆಗಳಿಗೆ ಹೆಚ್ಚು ಅನುದಾನ ಒದಗಿಲಾಗುವುದು ಎಂದರು.ಈ ಭಾಗದ ಜನರು ಕಾಗೋಡು ತಿಮ್ಮಪ್ಪ, ಬಂಗಾರಪ್ಪನವರನ್ನು, ಅವರು ಭೂ ಹಕ್ಕು ಕಾಯ್ದೆಗಾಗಿ ಮಾಡಿದ ಹೋರಾಟವನ್ನು ಸ್ಮರಿಸುತ್ತಾರೆ. ಅವರು ಮಾಡಿದ ಕೆಲಸಗಳು ಜೀವಂತವಾಗಿವೆ. ಅದೇ ನಿಟ್ಟಿನಲ್ಲಿ ನಾವು ಕೂಡ ಜನರು ನೆನೆಯುವ, ಜೀವಂತವಾಗಿರುವ ಕೆಲಸಗಳನ್ನು ಮಾಡಬೇಕು ಎಂದರು.
SUMMARY | District incharge minister S Madhu Bangarappa said the state government stood by the poor families through guarantee schemes.
KEYWORDS | District incharge minister, Madhu Bangarappa, guarantee schemes,