SHIVAMOGGA | MALENADUTODAY NEWS | ಮಲೆನಾಡು ಟುಡೆ Nov 27, 2024
ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಶಿಕ್ಷಕರಿಗೆ ಮಾನಸಿಕ ಒತ್ತಡ ಹೆಚ್ಚಾಗುತ್ತಿದೆಯಾ? ಹೌದು ಎನ್ನುತ್ತಿದೆ ಶಿಕ್ಷಕ ಸಮುದಾಯ. ಇದರ ನಡುವೆ ಗಾಯಕ್ಕೆ ಬರೆ ಇಡುವಂತೆ ಸರ್ಕಾರ ಶಿಕ್ಷಕರ ರಜೆಗೂ ಪರ್ಮಿಟ್ಟು ತೆಗೆದುಕೊಳ್ಳಬೇಕು ಎಂಬ ಮೌಖಿಕ ಷರತ್ತು ವಿಧಿಸಿದೆ. ಇದರಿಂದ ಶಿಕ್ಷಕರು ಪಾಠ ಹೇಳುವ ಕೆಲಸವೂ ಸಾಕು ಎನ್ನುತ್ತಿದ್ದಾರೆ.
ಶಾಲೆಗಳನ್ನ ಸರ್ಕಾರಗಳು ತನ್ನಿಷ್ಟಕ್ಕೆ ಪ್ರಯೋಗಶಾಲೆ ಮಾಡಿಕೊಂಡಿವೆ. ಪ್ರಮುಖವಾಗಿ ಸಾಧನೆಯ ರಿಸಲ್ಟ್ ತೋರಿಸುವ ಆತುರತೆಗೆ ಬಿದ್ದಿರುವ ಅಧಿಕಾರಿಗಳು ಶಾಲಾ ಶಿಕ್ಷಕ ಶಿಕ್ಷಕಿಯರ ಮೇಲೆ ಒತ್ತಡ ಹೇರುತ್ತಿದೆ. ಮೇಲಿನ ಈ ಆದೇಶಗಳನ್ನ ಹೊತ್ತು ಪರಿಪಾಲಿಸುವುದು ಶಿಕ್ಷಕವರ್ಗಕ್ಕೆ ಹೊರೆಯಾಗುತ್ತಿದೆ. ಎಷ್ಟರಮಟ್ಟಿಗೆ ಅಂದರೆ ಟೀಚರ್ಸ್‌ಗಳು ತಮ್ಮ ಮನೆಯ ಮಕ್ಕಳೊಂದಿಗೆ ಸಮಯ ಕಳೆಯುವುದು ಕಷ್ಟವಾಗುತ್ತಿದೆ ಎನ್ನುತ್ತಾರೆ ಶಿವಮೊಗ್ಗದ ಶಾಲೆಯೊಂದರಲ್ಲಿ ಶಿಕ್ಷಕರಾಗಿ ದುಡಿಯುತ್ತಿರುವವರು.
ಶಿಕ್ಷಣ ಇಲಾಖೆಯ ಅಡಿಯಲ್ಲಿ ಕೆಲಸ ಮಾಡುತ್ತಿರುವ ಟೀಚರ್ಸ್‌ಗಳಲ್ಲಿ ಬಹುಪಾಲು ಮಂದಿ ಒತ್ತಡದಿಂದಲೇ ಕೆಲಸ ಮಾಡುತ್ತಿದ್ದಾರೆ. ಮೇಲಿಂದ ಮೇಲೆ ಬರುತ್ತಿರುವ ಜವಾಬ್ದಾರಿಗಳನ್ನ ನೀಗಿಸುವುದು ಅವರುಗಳಿಗೆ ಕಷ್ಟವಾಗುತ್ತಿದೆ. ಬೆಳಗ್ಗೆ ಶಾಲೆ ಆರಂಭಕ್ಕೂ ಮೊದಲೇ ಶಾಲೆಗಳಿಗೆ ಬರುವ ಶಿಕ್ಷಕ ಶಿಕ್ಷಕಿಯರಿಗೆ ಮಕ್ಕಳ ಶಿಕ್ಷಣ ಕಲಿಸುವ ಜವಾಬ್ದಾರಿಯ ಜೊತೆಜೊತೆಗೆ ಹಾಲು, ಮೊಟ್ಟೆ, ಬಾಳೆಹಣ್ಣು, ಬಿಸಿಯೂಟ ಒದಗಿಸುವ ಮೇಲ್ವಿಚಾರಣೆಯ ಕೆಲಸ ಹೆಚ್ಚುವರಿ ಶ್ರಮ ನೀಡುತ್ತಿದೆ. ಸಾಲದ್ದಕ್ಕೆ ಮಕ್ಕಳ ಪ್ರೊಗ್ರೆಸ್ ವರದಿಗೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆಗೆ ಮಾಹಿತಿ ನೀಡಬೇಕು. ಪ್ರತಿ ಮಕ್ಕಳ ಅಪ್‌ಡೇಟ್‌ಗಳನ್ನ ಆನ್‌ಲೈನ್‌ನಲ್ಲಿ ತುಂಬಿಸಿ ಡೇಟ್‌ಲೈನ್‌ನೊಳಗೆ ಭರ್ತಿ ಮಾಡಬೇಕು. ಹೀಗೆ ಬೆಳಗ್ಗೆ ಒಂಬತ್ತು ಗಂಟೆಗೆ ಶಾಲೆಗೆ ಬರುವ ಶಿಕ್ಷಕ ಶಿಕ್ಷಕಿಯರು ಸಂಜೆ ಆರು ಏಳು ಗಂಟೆಯಾದರೂ ಮನೆಗೆ ಹೋಗಲಾಗದೇ ಶಾಲೆಯಲ್ಲಿಯೇ ಆ ದಿನದ ಕೆಲಸ ಮಾಡುತ್ತಿದ್ದಾರೆ.

ಈ ನಡುವೆ ಗೌರವಾನ್ವಿತ ಮುಖ್ಯೋಪಾಧ್ಯಾಯರೇ ತಮ್ಮ ಹಂತದಲ್ಲಿ ಶಿಕ್ಷಕರು ಮತ್ತು ಸಿಬ್ಬಂದಿಗಳಿಗೆ ಒಂದು ಅಥವಾ ಎರಡು ಸಾಂದರ್ಭಿಕ ರಜೆಗಳನ್ನು ಮಂಜೂರು ಮಾಡಲು ಮಾನ್ಯ ಕಾರ್ಯನಿರ್ವಹಣಾಧಿಕಾರಿಗಳು ಒಪ್ಪಿಗೆ ನೀಡಿರುತ್ತಾರೆಂದು ಮಾನ್ಯ ಉಪ ನಿರ್ದೇಶಕರು ತಿಳಿಸಿರುತ್ತಾರೆ ಎರಡಕ್ಕಿಂತ ಹೆಚ್ಚು ರಜೆ ಪಡೆಯುವವರು ಮುಖ್ಯೋಪಾಧ್ಯಾಯರ ಮೂಲಕ ಉಪ ನಿರ್ದೇಶಕರ ಅನುಮತಿ ಪಡೆಯುವುದು ಕಡ್ಡಾಯ ಎಂಬ ಸೂಚನೆಗಳನ್ನ ಮೌಖಿಕವಾಗಿ ಹೊರಡಿಸಲಾಗಿದೆ. ಲಿಖಿತ ಆದೇಶ ಕೊಟ್ಟರೇ, ಕಾನೂನು ಸಮಸ್ಯೆಯಾಗಲಿದೆ ಎಂಬ ಕಾರಣಕ್ಕೆ ಮೌಖಿಕ ಆದೇಶ ನೀಡಲಾಗಿದೆ.
ಇದು ಸದ್ಯ ಶಿಕ್ಷಕ ವರ್ಗದವರಿಗೆ ಶಾಕ್ ಕೊಟ್ಟಿದೆ. ವರ್ಷದ ಕೊನೆಯಲ್ಲಿ ಆಗುತ್ತೆ ಎಂದು ಸಿಎಲ್ ಉಳಿಸಿಕೊಂಡವರಿಗೆ, ಹುಷಾರಿಲ್ಲದೇ ಸಮಸ್ಯೆ ಎದುರಿಸುತ್ತಿರುವವರಿಗೆ , ಒತ್ತಡದಿಂದ ಹೊರಬರಲು ನಾಲ್ಕು ದಿನ ರೆಸ್ಟ್ ಮಾಡೋಣ ಎಂದುಕೊಳ್ಳುವವರಿಗೆ ತಮ್ಮ ರಜೆ ಪಡೆಯಲು ದೊಣ್ಣೆ ನಾಯಕರ ಬಳಿ ಬೇಡಿಕೊಳ್ಳುವ ಪರಿಸ್ಥಿತಿ ಎದುರಾಗಿದೆ ಎನ್ನುತ್ತಾರೆ ಹೆಸರು ಹೇಳಿಕೊಳ್ಳಲು ಇಚ್ಚಿಸಿದ ಒಬ್ಬ ಶಿಕ್ಷಕರು.
ಸಾಮಾನ್ಯವಾಗಿ ನೌಕರರ ವರ್ಗ ಡಿಸೆಂಬರ್ ತಿಂಗಳ ಹೊತ್ತಿನವರೆಗೂ ತಮ್ಮ ಸಿಎಲ್ ಗಳನ್ನ ಉಳಿಸಿಕೊಂಡಿರುತ್ತಾರೆ. ಡಿಸೆಂಬರ್‌ನಲ್ಲಿ ಅವುಗಳನ್ನ ಖಾಲಿ ಮಾಡಿಕೊಳ್ಳಲು ಮುಂದಾಗುತ್ತಾರೆ. ಆದರೆ ಇದೀಗ ಶಿಕ್ಷಕರ ವರ್ಗಕ್ಕೆ ಅಧಿಕಾರಿಗಳ ಆದೇಶ ತಲೆಬಿಸಿ ತಂದಿದೆ. ಹೀಗೆ ತಮ್ಮ ರಜೆಗೆ ಪರ್ಮಿಶನ್ ವ್ಯವಸ್ಥೆ ಮಾಡಿದರೆ, ತಮ್ಮ ಮಕ್ಕಳನ್ನ ಪ್ರವಾಸಕ್ಕೆ ಕರೆದುಕೊಂಡು ಹೋಗುವುದಾಗಲಿ, ಮನೆಯವರ ಜೊತೆಗೆ ಒಂದಿಷ್ಟು ದಿನ ಕಾಲ ಕಳೆಯುವುದಾಗಕ್ಕಾಗಲಿ ತೊಂದರೆಯಾಗುತ್ತದೆ ಎಂಬುದು ಶಿಕ್ಷಕರ ಅಳಲು.
ಸರ್ಕಾರ ಒಂಬತ್ತನೇ ತರಗತಿಯವರೆಗೂ ವಿದ್ಯಾರ್ಥಿಗಳನ್ನ ಫೇಲ್ ಮಾಡುವುದಿಲ್ಲ ಎಂದಿದೆ. ಆದರೆ 10 ತರಗತಿಗೆ 100 ಪರ್ಸೆಂಟ್ ರಿಸಲ್ಟ್ ಬೇಕು ಎಂದು ಟೀಚರ್ಸ್‌ಗೆ ತಾಕೀತು ಮಾಡಿದೆ. ಹಾಗೊಂದು ವೇಳೆ ರಿಸಲ್ಟ್ ಖೋತಾ ಆದರೆ, ಆ ಶಾಲೆಗಳ ಶಿಕ್ಷಕರಿಗೆ ಇಂಕ್ರಿಮೆಂಟ್ ಕೊಡಲು ವ್ಯವಸ್ಥೆ ಸತಾಯಿಸುತ್ತದೆ. ಇಂತಹದ್ದೊಂದು ಒತ್ತಡದಲ್ಲಿ ಕೆಲಸ ಮಾಡುವ ಶಿಕ್ಷಕರು ಎರಡು ದಿನದ ಮೇಲೆ ಹೆಚ್ಚುವರಿ ರಜೆ ಕೊಡಲು ಅನುಮತಿ ಕೇಳಬೇಕು ಎನ್ನುವುದು ಸರಿಯೇ ಎಂಬುದು ಪ್ರಶ್ನೆ.
SUMMARY | Do teachers need permission to take more than two days off?
KEY WORDS | Do teachers need permission to take more than two days off?